ಬಳ್ಳಾರಿ: ಮಂಡ್ಯ ಲೋಕಸಭಾ ಚುನಾವಣಾ ಸ್ಪರ್ಧಾಕಾಂಕ್ಷಿ ಸುಮಲತಾ ಅವರನ್ನ ಲೋಕಸಭಾ ಚುನಾವಣಾ ಉಸ್ತುವಾರಿ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಾಪ ಎಂದು ಸಂಬೋಧಿಸಿ ಅನುಕಂಪ ತೋರಿದ್ದಾರೆ.
ಬಳ್ಳಾರಿ ನಗರದ ಎಸ್ಪಿ ವೃತ್ತದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಪ ಸುಮಲತಾ ಅವರ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಗುರವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ, ಸುಮಲತಾ ಅಂಬರೀಶ್ ಅವರ ಬೆಂಬಲಿತರು ಹಾಗೂ ಅಭಿಮಾನಿಗಳೆಲ್ಲರೂ ಕಾಂಗ್ರೆಸ್ ಪಕ್ಷ ತ್ಯಜಿಸಲು ಮುಂದಾಗಿದ್ದಾರೆ ಎಂದರು.
ಸಚಿವ ಹೆಚ್.ಡಿ ರೇವಣ್ಣ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಕ್ಷಮೆಯಾಚಿಸಿದ್ದಾರೆ. ಇದ್ಯಾವ ನ್ಯಾಯ. ನನ್ನ ಹೇಳಿಕೆಗೆ ನಾನು ಬದ್ಧ ಎಂದಿರುವ ಸಚಿವ ರೇವಣ್ಣ ವಿತಂಡವಾದ ಮಾಡುತ್ತಿದ್ದಾರೆ. ಈ ರೀತಿಯಾಗಿ ಮುಂದುವರೆದರೆ ಜೆಡಿಎಸ್ಗೆ ಮಂಡ್ಯದಲ್ಲಿ ಉಳಿಗಾಲವಿಲ್ಲದಂತಾಗುತ್ತದೆ ಎಂದರು.
ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯ ಪ್ರಮುಖರು ಸೇರಿ ಸಭೆ ನಡೆಸಿದ್ದೇವೆ. ಸಂಘಟನೆಯ ಹಿತದೃಷ್ಟಿಯಿಂದ ಈಗಾಗಲೇ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸುತ್ತಿದ್ದೇವೆ. ಬಿಜೆಪಿ ಇಡೀ ದೇಶದಲ್ಲೇ ಅತೀ ಹೆಚ್ಚಿನ ಕಾರ್ಯಕರ್ತರ ಪಡೆ ಹೊಂದಿದೆ. ಮಾ.15ರಂದು ಕೋರ್ ಕಮಿಟಿ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿಯನ್ನು ತೀರ್ಮಾನ ಮಾಡಲಾಗುವುದು. ಬಳ್ಳಾರಿಯಲ್ಲಿ ಐದಾರು ಆಕಾಂಕ್ಷಿಗಳ ಪಟ್ಟಿಯಿದೆ. ಇಲ್ಲಿಂದ ಲಿಸ್ಟ್ ಕಳಿಸುತ್ತೇವೆ. ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಅಭ್ಯರ್ಥಿ ಹೆಸರು ತೀರ್ಮಾನ ಆಗಲಿದೆ ಎಂದರು.
ಬಳ್ಳಾರಿ ನಗರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಸಿದ ಸುದ್ದಿಗೋಷ್ಠಿ. ಮಹಾಘಟಬಂಧನ್ನಲ್ಲಿ ರಾಹುಲ್ ಗಾಂಧಿ ಅವರನ್ನ ಪ್ರಧಾನಿ ಅಭ್ಯರ್ಥಿ ಎಂದು ಯಾರೂ ಒಪ್ಪುತ್ತಿಲ್ಲ. 8-9 ಮಂದಿ ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಮಹಾಘಟಬಂಧನ್ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ ಎಂದು ಶೆಟ್ಟರ್ ಕಾಂಗ್ರೆಸ್ಗೆ ಸವಾಲೆಸೆದರು. ಸೀಟು ಹಂಚಿಕೆ ವಿಷಯದಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಗುದ್ದಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಅಸ್ಥಿರತೆ ಮುಂದುವರೆದಿದೆ. ಸುಮಲತಾ ಬಗ್ಗೆ ರೇವಣ್ಣ ಮಾತು ಸರಿಯಲ್ಲ. ರೇವಣ್ಣ ಈವರೆಗೂ ಕ್ಷಮೆ ಕೇಳ್ತಿಲ್ಲ. ರೇವಣ್ಣ ಭಂಡತನ ಪ್ರದರ್ಶನ ಮಾಡ್ತಿದ್ದಾರೆ ಎಂದರು.
ಲೋಕಸಭಾ ಚುನಾವಣೆ ನಂತ್ರ ಮೈತ್ರಿ ಸರ್ಕಾರ ಬೀಳಲಿದೆ. ಅವರಿಬ್ಬರಲ್ಲೂ ಯಾರಾದರೂ ಒಬ್ಬರು ಹೊರಗೆ ಬರೋದು ಗ್ಯಾರಂಟಿ. ಮೋದಿ ಗಾಳಿ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲಿ ಜೋರಾಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತ. ರಾಜಕೀಯ ಧ್ರುವೀಕರಣ ನಡೆಯುತ್ತಿದೆ. ಬೇರೆ ಪಕ್ಷದಿಂದ ನಮ್ಮ ಕಡೆ ಬಹಳ ಜನ್ರು ಬರುತ್ತಿದ್ದಾರೆ. ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಹೊಸ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.