ಬಳ್ಳಾರಿ: ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಎರ್ರಿಸ್ವಾಮಿಯು ಬಳ್ಳಾರಿ ಪಾಲಿಕೆ ಮೇಯರ್ ಪಟ್ಟ ಕೊಡಿಸುವುದಾಗಿ ಹೇಳಿ 30ನೇ ವಾರ್ಡ್ನ ಕಾಂಗ್ರೆಸ್ ಕಾರ್ಪೊರೇಟರ್ ಆಸೀಫ್ ಬಳಿ ಬರೋಬ್ಬರಿ ಮೂರುವರೆ ಕೋಟಿ ರೂ. ಪಡೆದು ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ಆಸೀಫ್ ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎರ್ರಿಸ್ವಾಮಿ ಆಸೀಫ್ನಿಂದ ಹಣ ಪಡೆದ ಕೆಲವೇ ತಿಂಗಳಲ್ಲಿ ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದೆ. ಆಸೀಫ್ಗೆ ಮೇಯರ್ ಪಟ್ಟ ಸಿಗಲಿಲ್ಲ. ಹೀಗಾಗಿ, ಹಣ ವಾಪಸ್ ಕೊಡುವಂತೆ ಎರ್ರಿಸ್ವಾಮಿಗೆ ಅನೇಕ ಬಾರಿ ಕೇಳಿದರೂ ಕ್ಯಾರೇ ಎನ್ನುತ್ತಿಲ್ಲ. ಅಲ್ಲದೇ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ದೂರು ಕೊಟ್ಟ ಬಳಿಕ ಆಸೀಫ್ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇತ್ತ ಎರ್ರಿಸ್ವಾಮಿ ಕೂಡ ಅನಾರೋಗ್ಯದ ನೆಪ ಹೇಳಿ ಬಳ್ಳಾರಿ ಬಿಟ್ಟಿದ್ದಾರೆ. ಪೊಲೀಸರು ಅಸೀಫ್ ದೂರು ಆಧರಿಸಿ ಎರ್ರಿಸ್ವಾಮಿ ವಿರುದ್ಧ ಐಪಿಸಿ 420 ಹಾಗೂ 506 ಅಡಿ ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.