ಬಳ್ಳಾರಿ: ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿ ಪರಭಾರೆ ವಿಚಾರವಾಗಿ ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಅಪಸ್ವರ ಎತ್ತಿದ್ದಾರೆ.
ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡುತ್ತಿರುವುದಕ್ಕೆ ವಿರೋಧ ಬಳ್ಳಾರಿಯ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದು ನಮ್ಮದೂ ವಿರೋಧವಿದೆ. ಗುತ್ತಿಗೆ ಆಧಾರದಡಿ ಭೂಮಿ ಕೊಡೋದು ನನಗೆ ಸಹಮತವಿದೆ. ಅದನ್ನು ನವೀಕರಣಗೊಳಿಸಿಕೊಳ್ಳುವ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು. ಈ ವೇಳೆ ಹಾಲಿ ಶಾಸಕ ಆನಂದಸಿಂಗ್ ಕೂಡ ಅನಿಲ್ ಲಾಡ್ ಅವರಿಗೆ ಸಾಥ್ ನೀಡಿದರು.
ಜಿಂದಾಲ್ ಸಮೂಹ ಸಂಸ್ಥೆಗೆ ಇಷ್ಟೊಂದು ಬೆಲೆಬಾಳುವ ಭೂಮಿಯನ್ನು ಪರಭಾರೆ ಮಾಡೋದು ಯಾವ ಆಧಾರದ ಮೇಲೆ ಎಂಬುದನ್ನು ರಾಜ್ಯ ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಸರ್ಕಾರ ಭೂಮಿ ಪರಭಾರೆ ಮಾಡಲು ಒಪ್ಪದರೆ, ಸಾವಿರಾರು ಕೋಟಿ ರೂ. ಬೆಲೆ ಬಾಳುವ ಈ ಭೂಮಿಯನ್ನು ಜಿಂದಾಲ್ ಸಮೂಹ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲಸೌಲಭ್ಯ ಪಡೆಯುವ ಸಾಧ್ಯತೆಯಿದೆ. ಹಾಗಾಗಿ, ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಬ್ಯಾಂಕಿನಲ್ಲಿ ಈ ಭೂಮಿಯನ್ನು ಅಡಮಾನ ಇಡಬಾರದೆಂಬ ಷರತ್ತು ಹಾಕುವ ಮುಖೇನ ಜಿಂದಾಲ್ ಸಂಸ್ಥೆಯವರೆಗೆ ಮಾರಾಟ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡೋದನ್ನ ವಿರೋಧಿಸಿ ಸಚಿವ ಸಂಪುಟದ ಉಪಸಮಿತಿಗೆ ಸಮಗ್ರ ವರದಿಯನ್ನೂ ನೀಡಲಾಗುವುದು ಎಂದು ಮಾಜಿ ಶಾಸಕ ಅನಿಲ್ ಲಾಡ್ ತಿಳಿಸಿದ್ದಾರೆ.