ಹೊಸಪೇಟೆ(ವಿಜಯನಗರ):ಆಡಳಿತ ಹಾಗೂ ಅಭಿವೃದ್ಧಿ ಹಿತದೃಷ್ಟಿಯಿಂದಸಣ್ಣ ಜಿಲ್ಲೆಗಳು ಮತ್ತು ತಾಲೂಕುಗಳ ರಚನೆ ಉತ್ತಮವಾದದ್ದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನೂತನ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಈ ಆರು ತಾಲೂಕುಗಳನ್ನು ಸೇರಿಸಿ ವಿಜಯನಗರ ಜಿಲ್ಲೆಯಾಗಿ ಸ್ಥಾಪಿತವಾಗಿದೆ. ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ಭಾವಿಸುತ್ತೇನೆ ಎಂದರು.
ಸಚಿವ ಆನಂದ್ ಸಿಂಗ್‌ರನ್ನು ಕೊಂಡಾಡಿದ ಬಿಎಸ್‌ವೈ
ವಿಜಯನಗರ ಜಿಲ್ಲೆ ಸ್ಥಾಪನೆಯಲ್ಲಿ ಆನಂದ್ ಸಿಂಗ್ ಅವರ ಛಲ ಹಾಗೂ ದೃಢ ನಿರ್ಧಾರಕ್ಕೆ ಬೇರಾವುದು ಸರಿಸಾಟಿ ಇಲ್ಲ. ಪ್ರತ್ಯೇಕ ಜಿಲ್ಲೆ ಸ್ಥಾಪನೆಗಾಗಿ ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಇಂದು ಸಚಿವ ಆನಂದ್ ಸಿಂಗ್ ಅತ್ಯಂತ ಸಂಭ್ರಮದಿಂದ ಸಂತೋಷ ಪಡುವ ಶುಭಗಳಿಗೆ ಆಗಿದೆ. ಅನೇಕ ವರ್ಷಗಳ ಹೋರಾಟದ ಪರಿಣಾಮ ತುಂಗಭದ್ರದ ತೀರದ ಬೆರಗು, ಭಕ್ತದ ಕಣಜದ ಸೆರಗಿನಲ್ಲಿ ವಿಜಯನಗರ ನೂತನ ಜಿಲ್ಲೆ ಉದ್ಘಾಟನೆಯಾಗಿದೆ. ಇತಿಹಾಸದ ಪುಟಗಳಲ್ಲಿ ವೈಭವ ಮೆರೆದ ಈ ಸಾಮ್ರಾಜ್ಯಕ್ಕೆ ಹೋರಾಟದ ನಂಟು ಕಣಕಣದಲ್ಲೂ ಬೆಸೆದಿದೆ. ಹೊಸ ಜಿಲ್ಲೆಗೂ ಇದೇ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಆಡಳಿತ, ಅಭಿವೃದ್ಧಿ ಹಿತದೃಷ್ಟಿಯಿಂದ ಸಣ್ಣ ಜಿಲ್ಲೆ, ತಾಲೂಕುಗಳ ರಚನೆ ಒಳ್ಳೆಯದು - ಬಿಎಸ್‌ವೈ ಅತ್ಯಂದ ಸಂಭ್ರಮದಿಂದ ಮತ್ತೊಂದು ಐತಿಹಾಸಿಕ ಜಿಲ್ಲೆ ಸೃಷ್ಟಿಸಿರುವುದು ಸೂಕ್ತರ್ಹವಾದದ್ದು, ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನ ವಿಜಯನಗರ ಜಿಲ್ಲೆ ಸ್ಥಾಪನೆಗೆ ಹಲವಾರು ಹೋರಾಟ, ಚಳವಳಿಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರೆಲ್ಲರ ಹೋರಾಟ, ಬಯಕೆ ಹಾಗೂ ಆನಂದ್ ಸಿಂಗ್ ಅವರ ಬದ್ಧತೆಯ ಫಲವಾಗಿ ಹೊಸ ಜಿಲ್ಲೆ ಉದ್ಘಾಟನೆಯಾಗಿದೆ ಎಂದರು.