ಹೊಸಪೇಟೆ: ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ಉದ್ಯಾನದ ಆವರಣದಲ್ಲಿ ಹಂಪಿ ಕಿರು ಮೃಗಾಲಯಕ್ಕೆ ಅರಣ್ಯ ಖಾತೆ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.
ಮೃಗಾಲಯ ಉದ್ಘಾಟಿಸಿದ ಬಳಿಕ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಕಾಲ್ನಡಿಗೆಯಲ್ಲೇ ತೆರಳಿ ಪ್ರಾಣಿಗಳನ್ನು ವೀಕ್ಷಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪ್ರಾಣಿಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಾಣಿ ಸಂಗ್ರಹಾಲಯ ಇಂದು ಅನಾವರಣಗೊಂಡಿದೆ. ಪ್ರವಾಸಿಗರು ಮೃಗಾಲಯದಲ್ಲಿ ಪರಿಸರ ಮತ್ತು ಪ್ರಾಣಿಗಳನ್ನು ನೋಡುವುದರ ಜೊತೆಗೆ ನೈಸರ್ಗಿಕ ಸೊಬಗನ್ನೂ ಸವಿಯಬಹುದು.
ಮೃಗಾಲಯಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹಂಪಿ ಐತಿಹಾಸಿಕ ಸ್ಥಳಗಳ ಜೊತೆಗೆ ಈ ಪ್ರಾಣಿ ಸಂಗ್ರಹಾಲಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಈ ಸಂಗ್ರಹಾಲಯಕ್ಕೆ ಬರಬೇಕಾದರೆ ಹೊಸಪೇಟೆಯಿಂದ 12 ಕಿ.ಮೀ. ದೂರ ಕ್ರಮಿಸಬೇಕಿದೆ. ಪ್ರವಾಸಿಗರು ಸಿಂಹ, ಹುಲಿ, ಕರಡಿ, ಚಿರತೆ, ಜಿಂಕೆ, ತೋಳ, ಮಂಗಗಳನ್ನು ನೋಡಬಹುದು.
ಸಾರ್ವಜನಿಕರ ಜೊತೆಗೆ ಮಾತನಾಡುತ್ತ ಎಲ್ಲರೂ ಪರಿಸರ ಪ್ರೇಮಿಗಳಾಗಬೇಕು. ಅದನ್ನು ಉಳಿಸಿ-ಉಳಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಶಾಸಕರಾದ ಜಿ.ಸೋಮಶೇಖರರೆಡ್ಡಿ, ಈ.ತುಕಾರಾಂ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಇದ್ದರು.