ಹೊಸಪೇಟೆ:ಹಂಪಿಯಲ್ಲಿನ ವ್ಯಾಪಾರಸ್ಥರು ಕೊರೊನಾ ಲಾಕ್ ಡೌನ್ ನಿಂದ ತತ್ತರಿಸಿ ಹೋಗಿದ್ದು, ಸ್ಮಾರಕಗಳ ವೀಕ್ಷಣೆಗೆ ಅವಕಾಶವನ್ನು ನೀಡಿದ್ದರೂ ಸಹ ಪ್ರವಾಸಿಗರು ಹಂಪಿಯತ್ತ ಸುಳಿಯುತ್ತಿಲ್ಲ. ಪ್ರವಾಸಿಗರನ್ನು ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿದ್ದಾರೆ.
ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರಲ್ಲಿ ಇಳಿಮುಖ, ಸಂಕಷ್ಟದಲ್ಲಿ ವ್ಯಾಪಾರಸ್ಥರು ಹಂಪಿಯಲ್ಲಿ ತೆಂಗಿನಕಾಯಿ, ಹೂ, ಹಣ್ಣು, ಹೋಟೆಲ್, ಕಲ್ಲಿನ ಆಕೃತಿಗಳು, ಪಂಚಲೋಹದ ಮೂರ್ತಿಗಳು, ಹೋಟೆಲ್, ಸೋಡಾ ಅಂಗಡಿ ಸೇರಿದಂತೆ ನೂರಾರು ವ್ಯಾಪಾರಸ್ಥರು ಪ್ರವಾಸಿಗರಿಂದ ಜೀವನವನ್ನು ಸಾಗಿಸುತ್ತಿದ್ದರು. ಈಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ವ್ಯಾಪಾರ ವಹಿವಾಟು ನಿಂತು ಹೋಗಿದೆ.
ನಿರ್ಬಂಧ ಸಡಿಲಿಸಿದರೂ ಬಾರದ ಪ್ರವಾಸಿಗರು:ಮಾ.22 ರಿಂದ ಹಂಪಿ ವೀಕ್ಷಣೆಗೆ ನಿರ್ಭಂಧ ವಿಧಿಸಲಾಗಿತ್ತು. ಬಳಿಕ ಜೂ.8 ರಿಂದ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೊಡಲಾಯಿತು. ಲಾಕ್ ಡೌನ್ ಜಾರಿಗೆ ಮುಂಚೆ ಸಾವಿರಾರು ಪ್ರವಾಸಿಗರು ಹಂಪಿಯನ್ನು ನೋಡಲು ಆಗಮಿಸುತ್ತಿದ್ದರು. ಆದರೆ, ಈಗ ನೂರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.
ವ್ಯಾಪರ ಕುಸಿತ: ಕೊರೊನಾ ಲಾಕ್ ಡೌನ್ ಮುಂಚೆ ಸಾವಿರಾರು ರೂ. ವ್ಯಾಪಾರ ಮಾಡುತ್ತಿದ್ದರು. ಆದರೆ, ಈಗ ನೂರು ರೂಪಾಯಿ ಆಗುವುದು ಕಷ್ಟಕರವಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತುಕೊಂಡರು ದುಡಿಮೆ ಇಲ್ಲದಂತಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಅಂಗಡಿ ಮುಂಗಟ್ಟು ಬಂದ್: ಸ್ನಾನಘಟ್ಟದ ಬಳಿ ಕೆಲ ಅಂಗಡಿ ಮುಂಗಟ್ಟು ಮಾತ್ರ ತೆರೆಯಲಾಗಿದೆ. ಅಲ್ಲದೇ, ಹಂಪಿ ಗ್ರಾಮ ಪಂಚಾಯಿತಿ ಮುಂಭಾಗದ ಹತ್ತಾರು ಬಂಡಿ ಅಂಗಡಿಗಳು ಮುಚ್ಚಲಾಗಿದೆ. ಈ ಮುಂಚೆ 15 ಜನ ತೆಂಗಿನಕಾಯಿ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಏಳು ಜನ ಮಾತ್ರ ತೆಂಗಿನಕಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಬೇರೆ ಕೆಲಸಕ್ಕೆ ತೆರಳಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ.
ಆಟೋಗಿಲ್ಲ ಬೇಡಿಕೆ: ಹಂಪಿಯಲ್ಲಿ ಆಟೋಗಳು ಸಾಲುಗಟ್ಟಿ ನಿಂತಿವೆ. ಪ್ರವಾಸಿಗರು ಇಲ್ಲದೇ ಅವುಗಳು ಕಾರ್ಯಾಚರಣೆಗೊಳ್ಳುತ್ತಿಲ್ಲ. ಆಟೋ ಚಾಲಕರು ದಿನ ಪೂರ್ತಿ ಕಾಯ್ದರು ಪ್ರವಾಸಿಗರು ಮಾತ್ರ ಹಂಪಿಯತ್ತ ಸುಳಿಯುತ್ತಿಲ್ಲ.
ವ್ಯಾಪಾರಿ ಸಂಗಯ್ಯ ಅವರು ಮಾತನಾಡಿ, ಕೊರೊನಾದಿಂದ ತುತ್ತಿನ ಚೀಲ ತುಂಬಿಸಿಕೊಳ್ಳುದು ಕಷ್ಟಕರವಾಗಿದೆ. ಲಾಕ್ ಡೌನ್ ಮುಂದೆ 600 ರಿಂದ 700 ದುಡಿಯಲಾಗುತ್ತಿತ್ತು. ಆದರೆ, 100 ರಿಂದ 200 ದುಡಿಯೋದು ಕಷ್ಟಕರವಾಗಿದೆ. ಲಾಕ್ ಡೌನ್ ಘೋಷಣೆಗೊಂಡಿದ್ದರಿಂದ ಮೂರು ತಿಂಗಳು ಮನೆಯಲ್ಲಿ ಮಲಗುವಂತಾಯಿತು. ಈಗ ಲಾಕ್ ಡೌನ್ ತೆರವುಗೊಳಿಸಿದ್ದರು ಪ್ರವಾಸಿಗರು ಹಂಪಿಗೆ ಸುಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತೆಂಗಿನಕಾಯಿ ವ್ಯಾಪಾರಿ ಮಂಜುಳ ಮಾತನಾಡಿ, ಈ ಮುಂಚೆ 500 ಕಾಯಿ ಮಾರಾಟ ಮಾಡಲಾಗುತ್ತಿತ್ತು. ಈಗ ಮಾರಾಟ ಸಂಪೂರ್ಣ ಕುಸಿದಿದೆ. ಲಾಕ್ ಡೌನ್ ಸಂದರ್ಭದಲ್ಲಿ ನರೇಗಾ ಕೆಲಸಕ್ಕೆ ಹೋಗುವಂತಾಗಿತ್ತು. ಕೆಲ ಜನರು ತೆಂಗಿನಕಾಯಿ ಮಾರಾಟ ಮಾಡುವುದನ್ನು ಬಿಟ್ಟಿದ್ದಾರೆ ಏಕೆಂದರೇ ಪ್ರವಾಸಿಗರ ಸಂಖ್ಯೆ ಕುಸಿದಿದೆ ಎಂದರು.