ಹೊಸಪೇಟೆ: ಮೂಢನಂಬಿಕೆ ಮತ್ತು ಮೌಢ್ಯತೆಯಿಂದ ದೇವದಾಸಿ ಪದ್ಧತಿ ಹುಟ್ಟಿದೆ. ಸಮಾಜದಲ್ಲಿ ಈ ಪದ್ಧತಿಯನ್ನು ಹೋಗಲಾಡಿಸಬೇಕು. ದೇವದಾಸಿಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ ಹೇಳಿದರು.
ನಗರದ ಬಲಿಜ ಭವನದಲ್ಲಿ ಆಯೋಜಿಸಿದ್ದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ದೇವದಾಸಿ ಅಂದರೆ ದೇವರಿಗೆ ದಾಸಿಯಾಗಿರುವವರು. ಆದರೆ, ಉನ್ನತ ವರ್ಗ ದೇವರ ಸೇವೆಗೆ ಬಿಡುತ್ತಿಲ್ಲ. ಸರ್ಕಾರ ಅವರಿಗೆ ಸೇರಬೇಕಾದ ಸೌಲಭ್ಯಗಳನ್ನು ಶೀಘ್ರ ತಲುಪಿಸಬೇಕು ಎಂದರು.
ಬಳ್ಳಾರಿ ಪೊಲೀಸ್ ಮಹಾನಿರ್ದೇಶಕ ಡಾ.ನಂಜುಂಡಸ್ವಾಮಿ ಭಾರತದ ಮೂಲ ನಿವಾಸಿಗಳು ಇಂದು ದೇಶದ ಅಸ್ಪೃಶ್ಯತೆಗೆ ಒಳಾಗಾಗಿದ್ದಾರೆ. ದಲಿತರನ್ನು ಕಿಳಿರಿಮೆ ಭಾವನೆಯಿಂದ ಕಾಣುತ್ತಿದ್ದಾರೆ. ಬಾದಾಮಿ ಚಾಲುಕ್ಯರು, ಹೊಯ್ಸಳರ ಅರಸರು ದಲಿತರು. ಮೊದಲು ಮೈಸೂರಿನ ಚಾಮುಂಡಿಗೆ ದಲಿತ ಜನಾಂಗದವರೇ ಪೂಜೆ ಸಲ್ಲಿಸುತ್ತಿದ್ದರು. ಕಾಲ ಬದಲಾದಂತೆ ಬ್ರಾಹ್ಮಣರು ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿದರು ಎಂದು ವಿವರಿಸಿದರು.
ದೇಶದಲ್ಲಿ ಮಧ್ಯ ರಾತ್ರಿಯಲ್ಲಿ ಕಾನೂನು ತರುತ್ತಾರೆ. ಅದಕ್ಕೆ ತಿದ್ದುಪಡಿ ತರುತ್ತಾರೆ. ಆದರೆ ದಲಿತರಿಗೆ ಹಾಗೂ ದೇವದಾಸಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳನ್ನು ಮಾತ್ರ ಏಕೆ ಜಾರಿ ಮಾಡುತ್ತಿಲ್ಲ. ಅವರಿಗೆ ಮೂಲಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದಲಿತ ಜನಾಂಗದಲ್ಲಿ ಹುಟ್ಟಿದ್ದೇವೆ ಎಂಬ ಕೀಳರಿಮೆ ಭಾವನೆಯನ್ನು ಯುವಕರು ತಮ್ಮ ಮನಸ್ಸಿನಿಂದ ಮೊದಲು ತೆಗೆದು ಹಾಕಬೇಕು ಎಂದು ಧೈರ್ಯ ನೀಡಿದರು.