ಬಳ್ಳಾರಿ:ಮಹಾನಗರ ಪಾಲಿಕೆ ಸದಸ್ಯ ಆಸೀಫ್ ಬಾಷಾ ಕೌಲಜಾರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್ ಮುಖಂಡ ಟಿ.ಜಿ ಎರಿಸ್ವಾಮಿ ಮೇಯರ್ ಮಾಡುವುದಾಗಿ 3.5 ಕೋಟಿ ನಗದು ಪಡೆದುಕೊಂಡಿದ್ದಾರೆ ಎನ್ನಲಾದ ವಂಚನೆ ಆರೋಪವನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ತಳ್ಳಿಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಯರ್ ಸ್ಥಾನಕ್ಕಾಗಿ ಯಾವುದೇ ಹಣಕಾಸಿನ ಡೀಲ್ ನಡೆದಿಲ್ಲ. ಮಹಾನಗರ ಪಾಲಿಕೆ ಸದಸ್ಯ ಆಸೀಫ್ ಬಾಷಾ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿಯ ಕೆಲ ನಾಯಕರು ತಂತ್ರದಿಂದ ಆಸೀಫ್ ಅವರನ್ನ ಬಿಜೆಪಿಗೆ ಸೆಳೆಯಲು ಒತ್ತಡ ಹಾಕಿ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ ಮೇಯರ್ ಸ್ಥಾನಕ್ಕಾಗಿ ಡೀಲ್ ಆರೋಪ ಶಾಸಕ ನಾಗೇಂದ್ರ ಪ್ರತಿಕ್ರಿಯೆ ನನ್ನ ಬಾಮೈದ ಎರಿಸ್ವಾಮಿ ಹಾಗೂ ಪಾಲಿಕೆ ಸದಸ್ಯ ಆಸೀಫ್ ಇಬ್ಬರು ಆಪ್ತರು. ಒಟ್ಟಾಗಿ ಸಾಕಷ್ಟು ವ್ಯವಹಾರಗಳನ್ನ ಮಾಡಿದ್ದಾರೆ. ಆಳಿಯ ಮಾವನಂತೆ ಇದ್ದವರು. ಕಳೆದ 12-15 ವರ್ಷಗಳಿಂದ ಆಸೀಫ್ ನಮ್ಮ ಪಕ್ಷದಲ್ಲಿದ್ದಾರೆ. ಅವರ ಮಾವ ನನ್ನ ಸ್ನೇಹಿತ. ನಮ್ಮ ಜತೆಯಲ್ಲಿರುವ ಆಸೀಫ್ ಈ ರೀತಿ ಯಾಕೆ ಮಾಡಿದ್ದಾನೆ ಎಂದು ಕೇಳಿ ನನಗೆ ದಿಗ್ಬಮ್ರೆಯಾಗಿದೆ. ಇದರ ಹಿಂದೆ ಬಿಜೆಪಿ ಪ್ರಭಾವಿ ವ್ಯಕ್ತಿಗಳು ಇದ್ದಾರೆ. ಅಲ್ಲದೇ, ನನ್ನ ವಿರುದ್ಧ ಸಚಿವ ಶ್ರೀರಾಮುಲು ಸ್ಪರ್ಧೆ ಮಾಡುವುದಕ್ಕೆ ಕೇಸ್ ಮಾಡಿಸಿ ಕಾಂಗ್ರೆಸ್ ಇಮೇಜ್ ಡ್ಯಾಮೇಜ್ ಮಾಡಲು ಪ್ರಯತ್ನಿಸುತ್ತಿದ್ದಾರೆ ವಾಗ್ದಾಳಿ ನಡೆಸಿದರು.
ಎರಿಸ್ವಾಮಿ ನಮ್ಮ ಪಕ್ಷದ ಬಲಿಷ್ಠ ಶಕ್ತಿ. ಕಾಂಗ್ರೆಸ್ ಸದಸ್ಯರನ್ನ ಗೆಲ್ಲಿಸುವಲ್ಲಿ ಅವರ ಪಾತ್ರ ಗಮನಾರ್ಹ. ಬಿಜೆಪಿಯವರು ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ. ಅಲ್ಲದೇ ಪಾಲಿಕೆ ಸದಸ್ಯರಿಗೆ ಹಳೆಯ ಕೇಸ್ಗಳನ್ನು ಓಪನ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಕೆಲ ಮುಖಂಡರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೂ ಹಾಕಿದ್ದಾರೆ. ಇದು ತಂತ್ರಗಾರಿಕೆ ಅಲ್ಲ. ಇದು ಕುತಂತ್ರಗಾರಿಕೆ ಎಂದು ಶಾಸಕ ನಾಗೇಂದ್ರ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ಬಳ್ಳಾರಿ ಪಾಲಿಕೆ ಮೇಯರ್ ಪಟ್ಟಕ್ಕೆ ನಡೆಯಿತೇ ಷಡ್ಯಂತ್ರ : ದಾಖಲಾದ ದೂರಿನಲ್ಲೇನಿದೆ?