ಬಳ್ಳಾರಿ: ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳನ್ನು ಇಲಾಖೆ ಮಾನದಂಡಗಳ ಪ್ರಕಾರ ಮಾಹಿತಿ ನೀಡದೇ ಅಕ್ರಮವಾಗಿ ಪಡೆದಿರುವುದು ಕಂಡು ಬಂದಿದ್ದು, ಏ.15 ರೊಳಗಾಗಿ ಹಿಂತಿರುಗಿಸಿ ಎಪಿಎಲ್ ಪಡಿತರ ಚೀಟಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆಯನ್ನು ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು ರೂ.1,20,000/-ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವಂತ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕುಚಕ್ರದ ವಾಹನವನ್ನು ಹೊಂದಿರುವವರು ಮಾನದಂಡಗಳನ್ನು ಮೀರಿ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಪಡೆದಿದ್ದಾರೆ. ಇಂತಹ ಪಡಿತರ ಚೀಟಿದಾರರು ಸ್ವಯಂಪ್ರೇರಿತವಾಗಿ ಆಯಾ ತಾಲೂಕಿನ ತಹಶೀಲ್ದಾರರಿಗೆ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಎ.ಪಿ.ಎಲ್ ಪಡಿತರ ಚೀಟಿಯನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.