ಬಳ್ಳಾರಿ: ಗಣಿನಾಡು ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದ ಮನೆಯೊಂದರಲ್ಲಿ ಹೋಂ ಐಸೋಲೇಷನ್ ನಲ್ಲಿದ್ದ ಕೋವಿಡ್ ಸೋಂಕಿತ ವೃದ್ಧರೊಬ್ಬರು ಗ್ರಾಮ ಪಂಚಾಯಿತಿ ಪಿಡಿಒ ನಿರ್ಲಕ್ಷ್ಯ ತೋರಿದ ಹಿನ್ನೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಆಡಳಿತದ ನಿರ್ಲಕ್ಷ್ಯಕ್ಕೆ ಹೋಂ ಐಸೋಲೇಷನ್ ನಲ್ಲಿದ್ದ ವೃದ್ಧ ಬಲಿ: ಆರೋಪ ಗಣಿ ಜಿಲ್ಲೆಯಲ್ಲಿ ಶವ ಸಂಸ್ಕಾರದ ವೇಳೆ ಅನುಚಿತವಾಗಿ ವರ್ತಿಸಿರೋದು ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ವಯೋ ವೃದ್ಧರೊಬ್ಬರು ತಮ್ಮನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸುವಂತೆ ಪರಿಪರಿಯಾಗಿ ಕಾಡಿ - ಬೇಡಿಕೊಂಡ್ರೂ ಕೂಡ ಕರುಣೆ ತೋರದ ಬೆಳಗಲ್ಲು ಗ್ರಾಮ ಪಂಚಾಯಿತಿ ಪಿಡಿಒ ಇದೀಗ ಅವರ ಸಾವಿಗೆ ಕಾರಣವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಇದಲ್ಲದೇ, ಸಮಯಾನುಸಾರ ಚಿಕಿತ್ಸೆ, ಆಹಾರ ದೊರಕದ ಹಿನ್ನೆಲೆಯಲ್ಲಿ ಕೂಡ ಮಹಾಮಾರಿ ಕೊರೊನಾ ಸೋಂಕಿಗೆ
ಆ 60 ವರ್ಷ ವಯೋಮಾನದ ವೃದ್ಧನೊಬ್ಬ ನಿನ್ನೆಯ ದಿನ ತಡರಾತ್ರಿ ಮನೆಯಲ್ಲೇ ಸಾವನ್ನಪ್ಪಿರೋದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ವಯೋವೃದ್ಧನು ಸಾಯುವ ಕೊನೆಗಳಿಗೆಯಲ್ಲಿ ಪಡಬಾರದ ಕಷ್ಟ ಪಟ್ಟಿದ್ದು, ಮನಕುಲಕುವಂತಿದೆ.
ಕನಿಷ್ಠ ಸಹಾಯಕ್ಕೆ ಯಾರೂ ಧಾವಿಸದೇ ಇರೋದರಿಂದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಟ್ಟೂರಿನ ಸಮಾರಂಭವೊಂದಕ್ಕೆ ಬಸ್ ಮುಖಾಂತರ ಪ್ರಯಾಣಿಸಿ ಬಂದಿದ್ದ ವೃದ್ಧನಿಗೆ ಕೆಮ್ಮು, ನೆಗಡಿ ಕಂಡು ಬಂದಿತ್ತು. ಆಗಸ್ಟ್ 14ರಂದು ಇವರು ಪರೀಕ್ಷೆ ಮಾಡಿಸಿಕೊಂಡಾಗ ಕೋವಿಡ್ ಪಾಸಿಟಿವ್ ಇರೋದು ಪತ್ತೆಯಾಗಿತ್ತು. ಹೀಗಾಗಿ ವೃದ್ಧ ಹೋಮ್ ಐಸೋಲೇಷನ್ಗೆ ಒಳಗಾಗಿದ್ದರು.
ಈ ವೇಳೆ, ವೃದ್ಧನಿಗೆ ಉಸಿರಾಟದಲ್ಲಿ ತೊಂದರೆಯಾಗಿದೆ. ಹೀಗಾಗಿ ವೃದ್ಧ ವೈದ್ಯರು, ಪಿಡಿಒಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಯಾರೊಬ್ಬರು ಸ್ಪಂದಿಸಿಲ್ಲ. ನನಗೆ ಸಮಯಾನುಸಾರ ಊಟ ಇಲ್ಲ. ಊಸಿರಾಡುವುದಕ್ಕೂ ಸಮಸ್ಯೆಯಾಗುತ್ತಿದೆ ಎಂದರೂ ವೈದ್ಯರು, ನಮ್ಮಲ್ಲಿ ಬೆಡ್ಗಳ ಕೊರತೆಯಿದೆ. ಖಾಲಿಯಾದ ತಕ್ಷಣ ನಾವು ಬಂದು ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಆದರೆ, ಎರಡು ದಿನ ಕಳೆದರೂ ಬಂದಿಲ್ಲ.
ಇತ್ತ ವೃದ್ಧನಿಗೆ ಸಮರ್ಪಕವಾಗಿ ಆಹಾರವು ದೊರೆತಿಲ್ಲ. ಅವರ ಮಗ ಬೆಳಗ್ಗೆ ಮತ್ತು ಮಧ್ಯಾಹ್ನ ಆಹಾರವನ್ನು ಕೆಲವೊಮ್ಮೆ ಮಾತ್ರ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ರಾತ್ರಿ ಸಮಯದಲ್ಲಿ ಮಧ್ಯಾಹ್ನ ಉಳಿದ ಆಹಾರವನ್ನು ವೃದ್ಧ ತಿಂದಿದ್ದಾರೆ. ನಂತರ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಹಾಯಕ್ಕೆ ಅಕ್ಕಪಕ್ಕದ ಮನೆಯವರನ್ನು ಕರೆದರೂ ಬಂದಿಲ್ಲ. ಸಂಬಂಧಿಕರಿಗೆ ಕರೆ ಮಾಡಿದರೂ ಯಾರು ಸರಿಯಾಗಿ ಸ್ಪಂದಿಸಿಲ್ಲ. ಕೊನೆಗೆ ವೈದ್ಯರು ಬರಲೇ ಇಲ್ಲ. ಗ್ರಾಪಂ ಪಿಡಿಒ ಕೂಡ ಮುತುವರ್ಜಿ ವಹಿಸಿ, ಆಶಾ ಕಾರ್ಯಕರ್ತೆಯರನ್ನು ಅವರ ಮನೆ ಹತ್ತಿರ ಕಳುಹಿಸಿಲ್ಲ. ತತ್ಪರಿಣಾಮವೇ ಚಿಕಿತ್ಸೆ, ಆಹಾರ ಸಿಗದೇ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ಡಿಸಿ ಸ್ಪಷ್ಟನೆ:
ಬಿ.ಬೆಳಗಲ್ಲು ಗ್ರಾಮದಲ್ಲಿ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರೇ ಪ್ರಾರಂಭದಲ್ಲಿ ಹೋಂ ಐಸೋಲೇಷನ್ ಇರುವುದಾಗಿ ತಿಳಿಸಿದ್ದರು. ಆ ನಂತರ ಅವರಿಗೆ ಉಸಿರಾಟದಲ್ಲಿ ಸಮಸ್ಯೆಯಾಗಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ನಮ್ಮಲ್ಲಿ ಬೆಡ್ ಗಳ ಕೊರತೆಯಿಲ್ಲ ಎಂದು ಡಿಸಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೋಂಕಿತ ವೃದ್ಧನಿಗೆ ಸರಿಯಾದ ಸಮಯಕ್ಕೆ ಆಹಾರ ದೊರೆತಿಲ್ಲ. ಕೊನೆ ಗಳಿಗೆಯಲ್ಲಿ ಉಸಿರಾಟದ ಸಮಸ್ಯೆಯಾಗಿದ್ದ ರಿಂದ ಮೃತಪಟ್ಡಿದ್ದಾರೆ. ಅವರು ಚಿಕಿತ್ಸೆಗೆಂದು ವೈದ್ಯರಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಅವರ ಮೊಬೈಲ್ ನಲ್ಲಿನ ಕರೆಗಳನ್ನ ಪರಿಶೀಲಿಸಲಾಗುವುದು ಎಂದು ಡಿಹೆಚ್ಒ ಡಾ. ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.