ಬಳ್ಳಾರಿ :ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆ ಲಾಕ್ಡೌನ್ ಕುರಿತಂತೆ ಪರ-ವಿರೋಧದ ಅಭಿಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿದೆ.
ಲಾಕ್ಡೌನ್ ಕುರಿತು ಜನ ಏನಂತಾರೆ? ಬಳ್ಳಾರಿ, ಹೊಸಪೇಟೆ, ಸಂಡೂರು ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶತಾಯಗತಾಯ ಪ್ರಯತ್ನ ನಡೆಸುತ್ತಿವೆ. ಆದರೆ, ಸಾರ್ವಜನಿಕರು ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ, ಜಿಲ್ಲಾಡಳಿತ ತನ್ನ ಕೈಚೆಲ್ಲಿ ಕುಳಿತುಕೊಂಡಿದ್ದು, ಸಾರ್ವಜನಿಕರ ಕೈಗೆ ಕೊರೊನಾ ಸೋಂಕು ನಿಯಂತ್ರಣದ ಜವಾಬ್ದಾರಿ ನೀಡಿದೆ.
ಯಾವ್ಯಾವ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ?: ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು ತಾಲೂಕಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿ ಕಂಡು ಬಂದರೆ, ಹರಪನಹಳ್ಳಿ ತಾಲೂಕಿನಲ್ಲಿ ಅತ್ಯಂತ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ಬಳ್ಳಾರಿ ತಾಲೂಕಿನಲ್ಲಿ 838, ಹೊಸಪೇಟೆ ತಾಲೂಕಿನಲ್ಲಿ 547, ಸಂಡೂರು ತಾಲೂಕಿನಲ್ಲಿ 668 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 19 ಪ್ರಕರಣ ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಲಾಕ್ಡೌನ್ ಅಗತ್ಯವಿಲ್ಲ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಬಳಕೆ ಹಾಗೂ ಹ್ಯಾಂಡ್ ಸ್ಯಾನಿಟೈಸ್ನಿಂದ ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂದು ಸೋನಿ ಗಿಫ್ಟ್ ಸೆಂಟರ್ನ ಮಾಲೀಕ ರಾಜು ತಿಳಿಸಿದ್ದಾರೆ. ಮಿಲನ ಸೌಹಾರ್ದ ಸಹಕಾರಿ ನಿಯಮಿತದ ಸಿಇಒ ತಿಪ್ಪೇರುದ್ರಗೌಡ ಮಾತನಾಡಿ, ಈ ಮೊದಲು ಸೋಂಕಿತರ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತ ಕೊಡುತ್ತಿತ್ತು.
ಅದರಿಂದ ಈ ಸೋಂಕು ಎಲ್ಲಿಂದ ಹಬ್ಬಿದೆ ಅಂತಾ ಗೊತ್ತಾಗುತ್ತಿತ್ತು. ಈಗ ಅದನ್ನ ನಿಲ್ಲಿಸಿರುವುದರಿಂದ ಸೋಂಕು ಎಲ್ಲಿಂದ ಬಂದಿದೆ ಎಂಬುದನ್ನ ತಿಳಿಯೋದು ಕಷ್ಟಸಾಧ್ಯವಾಗಿದೆ. ಟ್ರಾವೆಲ್ ಹಿಸ್ಟರಿ ಸಮುದಾಯದ ಹಂತಕ್ಕೆ ತಲುಪಿದೆ ಎಂಬುದು ತಿಳಿಯಲು ಸುಗಮವಾಗಲಿದೆ. ಇಲ್ಲಾಂದ್ರೆ ಜಿಲ್ಲೆಯನ್ನ ವಾರದ ಮಟ್ಟಿಗಾದ್ರೂ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ಕ್ರಮವಹಿಸಬೇಕೆಂದು ತಿಳಿಸಿದ್ದಾರೆ.