ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಜೆಡಿಎಸ್ - ಕಾಂಗ್ರೆಸ್ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ನಗರದ ಮೀನಾಕ್ಷಿ ವೃತ್ತದಲ್ಲಿರುವ ಜೆಡಿಎಸ್ ಕಚೇರಿಯಿಂದ ಜೆಡಿಎಸ್ ಹಿರಿಯ ಮುಖಂಡ ಮೀನಳ್ಳಿ ಡಿ. ತಾಯಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮತ್ತು ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಳಿಕ ಮಾತನಾಡಿದ ಮೀನಳ್ಳಿ ತಾಯಣ್ಣ, ಬಳ್ಳಾರಿ ಜಿಲ್ಲೆಯ ವಿಭಜನೆಗೆ ಯಾರೊಬ್ಬರೂ ಒಪ್ಪಲ್ಲ. ಸಚಿವ ಆನಂದ್ ಸಿಂಗ್ ತಮ್ಮ ಸ್ವಾರ್ಥಕ್ಕಾಗಿ ಈ ಕಾರ್ಯಕ್ಕೆ ಕೈ ಹಾಕಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ನಂತರ ಬಳ್ಳಾರಿ ಜಿಪಂ ಸದಸ್ಯ ಎ.ಮಾನಯ್ಯ ಮಾತನಾಡಿ, ಜಿಲ್ಲೆಯ ವಿಭಜನೆಗೆ ಪರ-ವಿರೋಧ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಈ ಹೋರಾಟ ಕೇವಲ ಐದಾರು ದಿನಕ್ಕೆ ಸೀಮಿತ ಆಗಲ್ಲ. ಇದು ನಿರಂತರವಾಗಿ ಮುಂದುವರೆಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.