ಬಳ್ಳಾರಿ: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಕೊಡಿಸುವುದಾಗಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಬಾಮೈದ, ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಪಾಲಿಕೆಯ ಸದಸ್ಯರೊಬ್ಬರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿ, ಈಗ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೇಯರ್ ಸ್ಥಾನ ಕೊಡಿಸುವುದಾಗಿ ನಂಬಿಸಿ 3.5 ಕೋಟಿ ರೂಪಾಯಿ ಪಡೆದು, ಇದೀಗ ಯಾವುದೇ ಸ್ಥಾನ ಕೊಡಿಸದೇ ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಿದ್ರೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ವಾರ್ಡ್ ನಂಬರ್ 30 ರ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಎನ್.ಎಂ.ಡಿ.ಆಸೀಫ್ ಬಾಷಾ ಅವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿನಲ್ಲೇನಿದೆ?: ಟಿ.ಜಿ.ಎರಿಸ್ವಾಮಿ ನನ್ನನ್ನು ಮೇಯರ್ ಮಾಡುವುದಾಗಿ 3.5 ಕೋಟಿ ನಗದು ಪಡೆದುಕೊಂಡಿದ್ದರು. ಮೊದಲು ಮೇಯರ್ ಮೀಸಲಾತಿ ಸಾಮಾನ್ಯ ವರ್ಗಕ್ಕಿತ್ತು. ನನಗೆ ಸ್ಥಾನ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದರು. ಆದರೆ, ಈಗ ಮೀಸಲಾತಿ ಬದಲಾವಣೆ ಆಗಿದೆ ಎಂದು ಮೇಯರ್ ಸ್ಥಾನ ನೀಡಿಲ್ಲ. ಹೀಗಾಗಿ, ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆಸೀಪ್ ದೂರು ದಾಖಲು ಮಾಡಿದ್ದಾರೆ.
ಕಳೆದ ವರ್ಷ 23-5-21 ರಂದು ಎರಡು ಕೋಟಿ ಹಾಗೂ ಜನವರಿ 2022 ರಲ್ಲಿ ಒಂದುವರೆ ಕೋಟಿ ನೀಡಿದ್ದಾರೆ ಎನ್ನಲಾಗಿದೆ. ಟಿ.ಜಿ.ಎರಿಸ್ವಾಮಿಯವರು ಗ್ರಾಮೀಣ ಶಾಸಕ ನಾಗೇಂದ್ರ ಅವರ ಸಂಬಂಧಿಯಾಗಿದ್ದಾರೆ. ಶಾಸಕರ ಅನೇಕ ಕಾರ್ಯಗಳು ಇವರ ಉಸ್ತುವಾರಿಯಲ್ಲೇ ನಡೆಯುತ್ತಿತ್ತು. ಸದ್ಯಕ್ಕೆ ಎರಿಸ್ವಾಮಿ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ನೇರವಾಗಿ ಆರೋಪ ಕೇಳಿ ಬರುತ್ತಿರುವುದು ಶಾಸಕ ನಾಗೇಂದ್ರ ಮೇಲೆ. ಹಾಗಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ಅವರೇ ಪ್ರತಿಕ್ರಿಯೆ ನೀಡಬೇಕಿದೆ.
ಇದನ್ನೂ ಓದಿ:ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಹಿಯಾಗುತ್ತಾ ಸಕ್ಕರೆ?