ಬಳ್ಳಾರಿ:ಬೇಡಿಕೆಗಳು ಈಡೇರದಿದ್ದರೆ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಳಿಕ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಬಿಸಿಯೂಟ ನೌಕರರ ಭವಿಷ್ಯ ನಿಧಿಯು (ಪಿಂಚಣಿ), ಕಳೆದ ಮೂರು ಬಾರಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಲ್.ಐ.ಸಿ ಪಿಂಚಣಿ ವಿಭಾಗದ ಅಧಿಕಾರಿಗಳು, ಸಂಘಟನಾ ಮುಖಂಡರ ಜೊತೆಗೆ ಚರ್ಚೆ ಮಾಡಿ ನೌಕರರಿಂದ 100 ರೂ. ಮತ್ತು ಸರ್ಕಾರ 100 ರೂಪಾಯಿ ಹಾಕಿ ಎಲ್.ಐ.ಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ನೀಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಇನ್ನೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳು ಈಡೇರದಿದ್ದರೆ ಹೋರಾಟ ಮಾಡುವುದಾಗಿ ಸಿಐಟಿಯು ಎಚ್ಚರಿಕೆ ಬಿಸಿಯೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗಮ್ಮ ಮಾತನಾಡಿ, ನೌಕರರಿಗೆ ಸೂಕ್ತ ವೇತನ, ಪಿಂಚಣಿ ಮತ್ತು ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ತಿಂಗಳಿಗೆ ರಾಜ್ಯ ಸರ್ಕಾರದಿಂದ 2600 ರಿಂದ 2700 ರೂಪಾಯಿ ಸಂಬಳ ಬರುತ್ತೆ. ಆದರೆ ಮಾರುಕಟ್ಟೆಯ ದರಗಳು ಹೆಚ್ಚಾಗಿರುವುದರಿಂದ ಈ ಸಂಬಳದಲ್ಲಿ ಬದುಕುವುದು ಕಷ್ಟ ಸಾಧ್ಯ ಎಂದರು.
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶ ಹೊರಡಿಸಿದೆ. ಒಟ್ಟಾರೆಯಾಗಿ 1 ಲಕ್ಷ 18 ಸಾವಿರ ಸಿಬ್ಬಂದಿಗೆ ವಿಶೇಷ ಪಿಂಚಣಿ ಸೌಲಭ್ಯ ನೀಡಬೇಕು. ಹಾಗೂ ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್ 17 ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಸಿಐಟಿಯು ಸದಸ್ಯರು ತಿಳಿಸಿದರು.