ಬಳ್ಳಾರಿ: ಮಂಗಳವಾರ(ನಿನ್ನೆ) ಬಳ್ಳಾರಿಯ ಪಾರ್ವತಿ ನಗರದಿಂದ ಮನೆ ಬಿಟ್ಟು ನಾಪತ್ತೆಯಾಗಿದ್ದ ಮಕ್ಕಳು ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ರಜೆ ಹಿನ್ನೆಲೆಯಲ್ಲಿ ಪಾರ್ವತಿ ನಗರದ ಚಂದ್ರಶೇಖರ್ ಹಾಗೂ ವೀರೇಶ್ ಎಂಬವರ ನಾಲ್ವರು ಹೆಣ್ಣು ಮಕ್ಕಳು ಮನೆಯಲ್ಲಿ ಆಟ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪೋಷಕರು, 'ಆಟವಾಡುವುದನ್ನು ಬಿಟ್ಟು ಶಿಕ್ಷಣದ ಕಡೆ ಗಮನ ಕೊಡಿ' ಎಂದು ಕಿವಿಮಾತು ಹೇಳಿದ್ದಾರೆ. ಹಾಗಾಗಿ, ನಾವು ಕೂಡ ನಮ್ಮ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧಾರ ಮಾಡಿ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಲು ಬಸ್ ಹತ್ತಿ ಬೆಂಗಳೂರಿನೆಡೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಪೋಷಕರು ಗದರಿದರೆಂದು ಬಳ್ಳಾರಿಯಲ್ಲಿ ಮನೆ ಬಿಟ್ಟ ಮಕ್ಕಳು ಬೆಂಗಳೂರಿನಲ್ಲಿ ಪತ್ತೆ
ಬಳ್ಳಾರಿಯಲ್ಲಿ ನಾಪತ್ತೆಯಾದ ಮಕ್ಕಳು ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ನಿನ್ನೆ ಸಂಜೆ 6 ಗಂಟೆಗೆ ಕುರಗೋಡು-ಬೆಂಗಳೂರು ಬಸ್ ಹತ್ತಿರುವ ಹೆಣ್ಣು ಮಕ್ಕಳು ಬೆಂಗಳೂರಿನೆಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಕ್ಕಳನ್ನು ನೋಡಿದ ಬಸ್ ನಿರ್ವಾಹಕ ಅನುಮಾನಗೊಂಡು ನೀವು ಯಾರು? ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಆದ್ರೆ ಮಕ್ಕಳು ಯಾವುದನ್ನೂ ಹೇಳದೇ ಎಲ್ಲವನ್ನೂ ಮರೆಮಾಚಿದ್ದಾರೆ. ಆದರೆ ಯಾವಾಗ ಬೆಂಗಳೂರು ತಲುಪಿದ್ರೋ ಆಗ ಬೆಂಗಳೂರು ನಗರ ನೋಡಿ ಗಾಬರಿಯಿಂದ ಎಲ್ಲವನ್ನೂ ತಿಳಿಸಿದ್ದಾರೆ. ಕೂಡಲೇ ಬಸ್ ಚಾಲಕ ಹಾಗೂ ನಿರ್ವಾಹಕರು ಮಕ್ಕಳನ್ನು ನೇರವಾಗಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ರವಿ ಚನ್ನಣ್ಣನವರ್ ಸೋದರನ ವಿರುದ್ಧ ಗಂಭೀರ ಆರೋಪ: ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಮಹಿಳೆ