ಹೊಸಪೇಟೆ :ವಿಶ್ವವಿಖ್ಯಾತ ಹಂಪಿಯ ಕಿಷ್ಕಿಂಧಾದಲ್ಲಿ ಭವ್ಯ ಹನುಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ದೇಶದಲ್ಲಿ ಸಂಚಾರ ಮಾಡಲಿದೆ. ಮಾ.15ರಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ರಥಯಾತ್ರೆಯು 12 ವರ್ಷಗಳ ಕಾಲ ದೇಶದಲ್ಲಿ ಸಂಚಾರ ಮಾಡಲಿದೆ.
ಹಂಪಿಯ ಶ್ರೀಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ರಥಯಾತ್ರೆಗೆ ಮುಂದಾಗಿದ್ದಾರೆ. ಈಗಾಗಲೇ ವಿಶೇಷ ರಥವನ್ನು ಸಹ ಸಿದ್ಧಪಡಿಸಲಾಗಿದೆ.
ಕಿಷ್ಕಿಂಧಾ ಭವ್ಯ ಹನುಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ 12 ವರ್ಷಗಳ ಕಾಲ ರಥಯಾತ್ರೆ ರಥದಲ್ಲಿ ಏನಿರಲಿದೆ?: ರಾಮ ಜನ್ಮಭೂಮಿ ಅಯೋಧ್ಯಯಿಂದ ತಂದ ಪಾದುಕೆಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲದೇ, ಪಂಪಾವಿರೂಪಾಕ್ಷೇಶ್ವರ, ಕಿಷ್ಕಿಂಧಾ ಹನುಮಂತ, ರಾಮ, ಸೀತಾ, ಲಕ್ಷ್ಮಣ, ಅಂಜನಿದೇವಿ ಮಾತೆ ಸೇರಿ ಇನ್ನಿತರ ದೇವರ ಉತ್ಸವ ಮೂರ್ತಿಗಳು ಸಹ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮೊದಲು ಒಂದು ವರ್ಷಗಳ ಕಾಲ ರಥಯಾತ್ರೆ ರಾಜ್ಯದಲ್ಲಿ ಸಂಚಾರ ಮಾಡಲಿದೆ. ಬಳಿಕ ದೇಶದ ನಾನಾ ರಾಜ್ಯಗಳಲ್ಲಿ ರಥಯಾತ್ರೆ ಸಾಗಲಿದೆ.
ರಥದ ವೈಶಿಷ್ಟ: ಭವ್ಯ ರಥದ ಮೇಲೆ ಹನುಮ ಚರಿತ್ರೆಯನ್ನು ಚಿತ್ರಗಳ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ಹನುಮ ಜನಿಸಿದ ಸ್ಥಳ ಅಂಜನಾದ್ರಿ ಚಿತ್ರವನ್ನೂ ಸಹ ಒಳಗೊಂಡಿದೆ. ಮೂರು ಗೋಪುರ ಹಾಗೂ ನಾಲ್ಕು ಗರ್ಭಗೃಹಗಳಿಂದ ಕೂಡಿದೆ.
ರಥಯಾತ್ರೆಯ ಮಾರ್ಗ : ಹಂಪಿಯಿಂದ ರಥಯಾತ್ರೆ ಪ್ರಾರಂಭವಾಗಲಿದೆ. ಬಳಿಕ ಕಮಲಾಪುರದಿಂದ ಅಂಜನಾದ್ರಿಗೆ ತಲುಪಿದ ನಂತರ ಒಂದು ವರ್ಷಗಳ ಕಾಲ ರಾಜ್ಯದಲ್ಲಿ ರಥ ಸಂಚಾರ ಮಾಡಲಿದೆ. ರಥ ಯಾತ್ರೆಯ ಸಂದರ್ಭದಲ್ಲಿ ರಾಮಭಜನೆ, ಕೀರ್ತನೆ, ವಿಶೇಷ ಪೂಜೆಯನ್ನು ಮಾಡವ ಸಂಕಲ್ಪವನ್ನು ಮಾಡಿಕೊಳ್ಳಲಾಗಿದೆ.
ಈಟಿವಿ ಭಾರತದೊಂದಿಗೆ ಶ್ರೀಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶ್ರೀಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ, ಭಕ್ತಿ ಹಾಗೂ ಧರ್ಮ ಪ್ರಚಾರಕ್ಕಾಗಿ ರಥಯಾತ್ರೆಯನ್ನು ಮಾಡಲಾಗುತ್ತಿದೆ.
ಪಂಪಾ ಕ್ಷೇತ್ರದ ಪುನರ್ ವೈಭವ ನಿರ್ಮಾಣವಾಗಬೇಕಾಗಿದೆ. ಕಿಷ್ಕಿಂದಾ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗಾಗಿ, ಹನುಮ ಭವ್ಯವಾದ ಮಂದಿರ ನಿರ್ಮಾಣವಾಗುವುದರ ಮೂಲಕ ಧರ್ಮ ಪುನರಸ್ಥಾಪನೆಯಾಗಬೇಕಾಗಿದೆ ಎಂದು ಹೇಳಿದರು.