ಕರ್ನಾಟಕ

karnataka

ETV Bharat / city

ಆಮೆಗತಿಯಲ್ಲಿ ಸಾಗಿದ ಬಳ್ಳಾರಿ ನೂತನ ಡಿಸಿ ಕಚೇರಿ ಕಾಮಗಾರಿ.. - ಡಾ.ರಾಜ್​ಕುಮಾರ್​ ರಸ್ತೆ

ಬಳ್ಳಾರಿ ನೂತನ ಡಿಸಿ ಕಚೇರಿ ಕಾಮಗಾರಿಯು ನಾನಾ ಕಾರಣಗಳಿಂದ ನೆಲಕಚ್ಚಿ ಕುಳಿತಿದ್ದು, ಹೀಗಾಗಿ ಜಿಲ್ಲಾಡಳಿತ ನಿಗದಿಪಡಿಸಿದ ಅವಧಿಗಿಂತ ಸುಮಾರು ಎಂಟು ತಿಂಗಳ ಕಾಲ ಹೆಚ್ಚಿನ ಅವಧಿಗೆ ನಿರ್ಮಾಣ ಕಾಮಗಾರಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ.

ನೆಲಕಚ್ಚಿ ಕುಳಿತ ಬಳ್ಳಾರಿ ನೂತನ ಡಿಸಿ ಕಚೇರಿ ನಿರ್ಮಾಣ ಕಾಮಗಾರಿ

By

Published : Sep 9, 2019, 9:54 AM IST

ಬಳ್ಳಾರಿ:ನಗರದ ಡಾ.ರಾಜ್​ಕುಮಾರ್​ ರಸ್ತೆಯಲ್ಲಿರುವ ಸರ್ಕಾರಿ ಅತಿಥಿಗೃಹದ ಕಾಂಪೌಂಡ್​ನಲ್ಲಿ ನಡೆಯುತ್ತಿರುವ ಹೊಸ ಜಿಲ್ಲಾಧಿಕಾರಿ ಕಚೇರಿಯ ನಿರ್ಮಾಣ ಕಾರ್ಯವು ಆಮೆಗತಿಯಲ್ಲಿ ಸಾಗಿದೆ.

ಕಳೆದ ಐದು ತಿಂಗಳ ಹಿಂದೆಯೇ ಈ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಶುರುವಾಗಿದೆ.‌ ಆದರೆ, ಕಾಮಗಾರಿ ಇನ್ನೂ ನೆಲಕಚ್ಚಿ ಕುಳಿತಿದೆ. ಬೆಂಗಳೂರು ಮೂಲದ 20 ಕ್ಕೂ ಹೆಚ್ಚು ಮಂದಿ ನುರಿತ ಎಂಜಿನಿಯರ್​ಗಳು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈವರೆಗೂ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಂಪನಿ ಅಥವಾ ಗುತ್ತಿಗೆದಾರರಿಗೆ ಅಗತ್ಯ ಅನುದಾನ ಬಿಡುಗಡೆ ಆಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.‌

ನೆಲಕಚ್ಚಿ ಕುಳಿತ ಬಳ್ಳಾರಿ ನೂತನ ಡಿಸಿ ಕಚೇರಿ ನಿರ್ಮಾಣ ಕಾಮಗಾರಿ

ಸಕಾಲದಲ್ಲಿ ಬಿಡುಗಡೆಯಾಗದ ಅನುದಾನ:

ಜಿಲ್ಲಾ ಕೇಂದ್ರದಲ್ಲಿರುವ ಬ್ರಿಟೀಷರ ಆಳ್ವಿಕೆ ಅವಧಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿಯ ಪಾರಂಪರಿಕ ಕಟ್ಟಡವು ಶತದಿನ ಪೂರೈಸುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಆದರೆ, ಇದು ರೈಲ್ವೆ ನಿಲ್ದಾಣದ ಮುಂಭಾಗ ಇದ್ದು, ರೈಲ್ವೆ ಇಲಾಖೆಗೆ ಸೇರಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಡಾ.ರಾಜ್​ಕುಮಾರ್ ರಸ್ತೆಯಲ್ಲಿನ ಸರ್ಕಾರಿ ಅತಿಥಿಗೃಹದ ಬಳಿಯಿರುವ ಸರಿಸುಮಾರು 4200 ಚದರ ಮೀಟರ್ ವಿಸ್ತೀರ್ಣ ಪ್ರದೇಶದಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ಕಟ್ಟಲಾಗುತ್ತಿದೆ. ಆದರೆ, ಕಾಮಗಾರಿಯಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಕೇವಲ 18 ತಿಂಗಳಲ್ಲಿ ಕಾಮಗಾರಿ ಪೂರೈಸುವ ಇರಾದೆ ಗುತ್ತಿಗೆದಾರರಿಗೆ ಇದೆಯಾದ್ರೂ, ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಕಾರಣ ವಿಳಂಬ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನೀರಿನ ಸಮಸ್ಯೆ:

ಕಾಮಗಾರಿ ಆರಂಭಿಸುವ ಮುನ್ನ ಸ್ಥಳದಲ್ಲಿ ಎರಡು ಬೋರ್‌ವೆಲ್‌ಗಳನ್ನು ಕೊರೆಯಿಸಲಾಗಿದ್ದು, ಇದರಲ್ಲಿ ಒಂದು ವಿಫಲವಾಗಿದೆ. ಸದ್ಯ ಇರುವ ಒಂದೇ ಬೋರ್‌ವೆಲ್‌ನಿಂದ ಕಾಮಗಾರಿಗೆ ನೀರಿನ ಪೂರೈಕೆ ಮಾಡಲಾಗುತ್ತಿದೆ.

ಮರಳು, ಮೆಟಲ್ ಕೊರತೆ:

ಜಿಲ್ಲೆಯಲ್ಲಿ ಮರಳು ಪೂರೈಕೆ ಇಲ್ಲದಿರುವುದರಿಂದ ಬೇಸ್‌ಮೆಂಟ್ ನಿರ್ಮಾಣಕ್ಕೆ ಗುತ್ತಿಗೆದಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರೊಂದಿಗೆ ಮೆಟಲ್ ಕೊರತೆ ಕಾಡುತ್ತಿರುವುದರಿಂದ ನೆರೆಯ ಆಂಧ್ರ ಪ್ರದೇಶದಿಂದ ಖರೀದಿ ಮಾಡಿಕೊಂಡು ಬರಲಾಗುತ್ತಿದೆ. ಹೀಗಾಗಿ ಮರಳು, ಮೆಟಲ್ ಅಭಾವ ಹೆಚ್ಚಾಗಿ ಕಾಡುತ್ತಿದೆ ಎನ್ನುತ್ತಾರೆ ಗುತ್ತಿಗೆದಾರರು.

ಅನುದಾನದ ಕೊರತೆ:

ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸದ್ಯ 25 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಆದರೆ ಇದರಲ್ಲಿ ರಸ್ತೆ, ಪಾರ್ಕಿಂಗ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕಷ್ಟ ಸಾಧ್ಯವಾಗಲಿದ್ದು, ಇನ್ನೂ ಹೆಚ್ಚಿನದಾಗಿ 30 ಕೋಟಿ ರೂ. ಅನುದಾನ ಬೇಕಾಗಬಹುದು ಎಂದು ಗುತ್ತಿಗೆದಾರರು ಅಂದಾಜಿಸಿದ್ದಾರೆ. ಹಂತ ಹಂತವಾಗಿ ಕಟ್ಟಡ ನಿರ್ಮಾಣ ಕೈಗೊಳ್ಳುತ್ತಿ ದ್ದಂತೆ ಕೆಲ ಬದಲಾವಣೆಗಳು ಸಹ ಆಗುತ್ತಿರುವ ಹಿನ್ನೆಲೆ ಹೆಚ್ಚಿನ ಹಣ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಹೀಗಾಗಿ ನಾನಾ ಕಾರಣಗಳಿಂದ ವಿಳಂಬವಾಗಿರುವ ಡಿಸಿ ಕಟ್ಟಡ ಕಾಮಗಾರಿಯು ಜಿಲ್ಲಾಡಳಿತ ನಿಗದಿಪಡಿಸಿದ ಅವಧಿಗಿಂತ ಸುಮಾರು ಎಂಟು ತಿಂಗಳು ಕಾಲ ಹೆಚ್ಚಿನ ಅವಧಿಗೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಕರ್ನಾಟಕ ಗೃಹ ಮಂಡಳಿಗೆ ಹೊಸ ಡಿಸಿ ಕಚೇರಿ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ವಹಿಸಲಾಗಿದ್ದು, ಈಗಾಗಲೇ 25 ಕೋಟಿ ರೂ. ಬಿಡುಗಡೆಯಾಗಿದೆ. ಕೆಳಮಹಡಿಯಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಈ ಟಿವಿ ಭಾರತ್​ಗೆ ತಿಳಿಸಿದ್ದಾರೆ.

ABOUT THE AUTHOR

...view details