ಬಳ್ಳಾರಿ: ಲಾಕ್ಡೌನ್ ಎಫೆಕ್ಟ್ನಿಂದ ಗಣಿನಾಡಿನ ಜೀನ್ಸ್ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಜಿಲ್ಲೆಯ ಜೀನ್ಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಕಾರ್ಮಿಕರ ಜೀವನ ಇದೀಗ ದುಸ್ತರವಾಗಿದೆ.
ಬಳ್ಳಾರಿಯ ಜೀನ್ಸ್ ಉತ್ಪನ್ನಗಳು ದೇಶ - ವಿದೇಶಗಳಲ್ಲಿ ಕೂಡ ಸದ್ದು ಮಾಡಿದೆ. ಆದರೆ ಕಳೆದೊಂದು ತಿಂಗಳಿಂದ ಕೊರೊನಾ ವೈರಸ್ ಹಿನ್ನೆಲೆ ಜೀನ್ಸ್ ಉದ್ಯಮ ಸ್ತಬ್ಧವಾಗಿದೆ. ಇದರಿಂದ ಜೀನ್ಸ್ ಘಟಕಗಳನ್ನೇ ನೆಚ್ಚಿಕೊಂಡು ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ.
ಟೈಲರ್, ಬಟ್ಟೆ ಕಟ್ ಮಾಡುವ ಕಾರ್ಮಿಕರಿಂದ ಹಿಡಿದು ಇನ್ನಿತರೆ ವಲಯದ ಕಾರ್ಮಿಕರ ಗೋಳು ಹೇಳತೀರದಾಗಿದೆ. ಈ ಜೀನ್ಸ್ ಉತ್ಪನ್ನಗಳು ದೇಶದ ನಾನಾ ರಾಜ್ಯ ಹಾಗೂ ವಿದೇಶಗಳಲ್ಲಿ ಕೂಡ ಮಾರಾಟ ಆಗುತ್ತಿದ್ದವು. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಈ ಜೀನ್ಸ್ ಉದ್ಯಮ ಗಳಿಸಿತ್ತಾದ್ರು ಕೂಡ ಇದನ್ನೇ ನೆಚ್ಚಿಕೊಂಡಿರುವ ಕಾರ್ಮಿಕರ ಜೀವನ ಮೂರಾಬಟ್ಟೆ ಆಗಿರುವುದಂತು ಸತ್ಯ.