ಬಳ್ಳಾರಿ: ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ ಬಳ್ಳಾರಿ ಪಾಲಿಕೆ ಮೇಯರ್ ಹುದ್ದೆ ಕೊಡಿಸುವುದಾಗಿ ಹೇಳಿ 30ನೇ ವಾರ್ಡ್ನ ಕಾಂಗ್ರೆಸ್ ಕಾರ್ಪೊರೇಟರ್ ಆಸೀಫ್ ಬಳಿ 3.5 ಕೋಟಿ ರೂ. ಪಡೆದು ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ದೂರು ದಾಖಲಾಗಿದ್ದು ಎರಿಸ್ವಾಮಿಯನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಸೈದುಲ್ ಅಡಾವತ್ ತಿಳಿಸಿದರು.
ಮೇಯರ್ ಸ್ಥಾನಕ್ಕೆ ಇಷ್ಟೊಂದು ಲಂಚ ನೀಡಿರುವುದಾಗಿ ಆರೋಪಿಸಿ ಕಾರ್ಪೊರೇಟರ್ ಆಸೀಫ್ ಒಂದು ವಾರದ ಹಿಂದೆಯೇ ದೂರು ದಾಖಲಿಸಿದ್ದರು. ಇದೀಗ ದೂರು ನೀಡಿದ್ದ ಅಸೀಫ್ ಮತ್ತು ಎರಿಸ್ವಾಮಿ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸ್ ಇಲಾಖೆ ನೀಡಿರುವ ನೋಟಿಸ್ ಗಡುವು ಸಹ ಮುಗಿದಿದೆ. ಹೀಗಾಗಿ, ಮೊದಲು ಆರೋಪಿಯನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಟಿ.ಜಿ.ಎರಿಸ್ವಾಮಿ ಮತ್ತು ಆಸೀಫ್ ನಡುವೆ ಶಾಸಕ ನಾಗೇಂದ್ರ ರಾಜಿ ಸಂಧಾನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಬಳ್ಳಾರಿ ಪಾಲಿಕೆ ಮೇಯರ್ ಪಟ್ಟಕ್ಕೆ ನಡೆಯಿತೇ ಷಡ್ಯಂತ್ರ : ದಾಖಲಾದ ದೂರಿನಲ್ಲೇನಿದೆ?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನಾಗೇಂದ್ರ, 'ಮೇಯರ್ ಸ್ಥಾನಕ್ಕೆ ಮೂರುವರೆ ಕೋಟಿ ಡೀಲ್ ಪ್ರಕರಣದ ಹಿಂದೆ ಬಿಜೆಪಿಯ ಪ್ರಭಾವಿ ವ್ಯಕ್ತಿಗಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಇಷ್ಟೆಲ್ಲಾ ಕುತಂತ್ರ ಮಾಡ್ತಿದ್ದಾರೆ. ಬಿಜೆಪಿಯವರು ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ. ಅಲ್ಲದೇ, ಪಾಲಿಕೆ ಸದಸ್ಯರಿಗೆ ಬೆದರಿಕೆ ಹಾಕಿ, ಹಳೇ ಕೇಸ್ಗಳನ್ನು ಓಪನ್ ಮಾಡುವುದಾಗಿ ಭಯ ಹುಟ್ಟಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಈ ಎಲ್ಲಾ ಬೆಳವಣಿಗೆಗಳನ್ನು ನಮ್ಮ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಬಳ್ಳಾರಿಯಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ದಬ್ಬಾಳಿಕೆ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್: ಆರೋಪ ತಳ್ಳಿಹಾಕಿದ ಶಾಸಕ ನಾಗೇಂದ್ರ