ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಇಬ್ಭಾಗ ಮಾಡಿದ್ದು, ಜಿಲ್ಲೆಯಲ್ಲಿರುವ ಹನ್ನೊಂದು ತಾಲೂಕುಗಳನ್ನು 5-6 ಅನುಪಾತದಡಿ ಹರಿದು ಹಂಚಿಕೆ ಮಾಡಿದೆ.
ನೂತನ ವಿಜಯನಗರ ಜಿಲ್ಲೆಗೆ ಒಂದು ತಾಲೂಕನ್ನು ಹೆಚ್ಚಿಗೆ ಸೇರಿಸುವ ಮೂಲಕ ಆ ಜಿಲ್ಲೆಯನ್ನು ದೊಡ್ಡದಾಗಿಸಿದೆ. ಬಳ್ಳಾರಿ ಜಿಲ್ಲೆಗೆ ಒಂದು ತಾಲೂಕನ್ನು ಕಡಿತಗೊಳಿಸುವ ಮೂಲಕ ಸಣ್ಣದಾದ ಜಿಲ್ಲೆಯನ್ನಾಗಿಸಿದೆ. ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡೋ ವಿಚಾರ ಕೂಡ ಇದೀಗ ಸರ್ಕಾರದ ಮುಂದಿದೆ. ಆದರೆ ಆ ತಾಲೂಕು ಸೇರ್ಪಡೆಯಾಗಲಿದೆಯಾ? ಎಂಬುದರ ಕುರಿತು ಕಾದು ನೋಡಬೇಕಿದೆ.
ರಾಜ್ಯ ರಾಜಧಾನಿ ಬೆಂಗಳೂರು ನಂತರ ನೆನಪಾಗೋದೇ ಬಳ್ಳಾರಿ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಸಂಪದ್ಭರಿತ ಜಿಲ್ಲೆಯಾಗಿ ಬಳ್ಳಾರಿ ಹೊರ ಹೊಮ್ಮಿತ್ತು. ಆದರೀಗ ಅಂತಹ ಜಿಲ್ಲೆಯನ್ನು ಇಬ್ಭಾಗ ಮಾಡಿರುವುದು ಬಳ್ಳಾರಿಗರಿಗೆ ನೋವುಂಟು ಮಾಡಿದೆ.
ಬಳ್ಳಾರಿ ಎಂದರೆ ಥಟ್ಟನೆ ನೆನಪಾಗೋದು ಹಂಪಿ:
ಬಳ್ಳಾರಿ ಎಂದರೆ ಸಾಕು ಥಟ್ಟನೆ ನೆನಪಾಗೋದು ಹಂಪಿ. ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ, ಯುನೆಸ್ಕೊ ಮಾನ್ಯತೆ ಹೊಂದಿದೆ. ಅದು ಹೀಗ ವಿಶ್ವ ಪಾರಂಪರಿಕ ತಾಣವಾಗಿ ಮಾರ್ಪಟ್ಟಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ದೊಡ್ಡ ಬಸವೇಶ್ವರ ಸ್ವಾಮಿಗೂ ಹಂಪಿಗೂ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಹಂಪಿ ವಿರುಪಾಕ್ಷೇಶ್ವರ ದೇಗುಲದ ಎದುರು ಬಸವಣ್ಣ ದೇಗುಲ ಇರುವುದೇ ಇದಕ್ಕೆ ಸಾಕ್ಷಿ. ಜೊತೆಗೆ ಬಳ್ಳಾರಿ ನಗರಕ್ಕೆ ಪ್ರಾಮುಖ್ಯತೆ ಸಿಕ್ಕಷ್ಟೇ ನೂತನ ಜಿಲ್ಲೆಯ ಹೊಸಪೇಟೆಗೆ ಅಷ್ಟೇ ಪ್ರಾಮುಖ್ಯತೆ ದೊರೆಯುತ್ತಿತ್ತು. ಯಾಕಂದ್ರೆ ಅಲ್ಲಿನ ತುಂಗಭದ್ರಾ ಜಲಾಶಯವೇ ಪ್ರಮುಖ ಆಕರ್ಷಣೆಯ ಕೇಂದ್ರ. ಇದಲ್ಲದೆ ಬೊಮ್ಮಘಟ್ಟದ ಹುಲಿಕುಂಟೇರಾಯ ದೇಗುಲದ ಪ್ರಸಿದ್ಧತೆ ಹಾಗೂ ಪ್ರತಿ ವರ್ಷ ಅಲ್ಲಿ ಫಾಲ್ಗುಣ ಶುಕ್ಲದ ದಶಮಿಯಂದು ನಡೆಯುವ ರಥೋತ್ಸವ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಸಿದ್ದಲಿಂಗೇಶ್ವರ ರಥೋತ್ಸವ ಅತ್ಯಂತ ವೈಭವದಿಂದ ನಡೆಯೋದೇ ಈ ಅಖಂಡ ಜಿಲ್ಲೆಯ ವಿಶೇಷ ಎನಿಸಿತ್ತು.
ಇದನ್ನೂ ಓದಿ:ಬಳ್ಳಾರಿಗೆ ಮೊಳಕಾಲ್ಮೂರು ಸೇರ್ಪಡೆಗೊಳಿಸಲು ಬಿಡುವುದಿಲ್ಲ- ಚಿಟ್‌ಚಾಟ್
ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯನ್ನೇ ರಾಜಧಾನಿಯಾಗಿ ಹೊಂದಿದ್ದರಿಂದ ಆ ಸಮಯದಲ್ಲಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದಿತ್ತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಇದು ಕೂಡ ಇತಿಹಾಸವೇ ಸರಿ.
ಇದನ್ನೂ ಓದಿ:31ನೇ ಜಿಲ್ಲೆಯಾಗಿ ವಿಜಯನಗರ.. ಸರ್ಕಾರದ ಅನುಮೋದನೆಗೆ ಹೋರಾಟಗಾರರು ಖುಷ್!
ಭೌಗೋಳಿಕವಾಗಿ ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ, ದಕ್ಷಿಣಕ್ಕೆ ದಾವಣಗೆರೆ- ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಗೀನ ಆಂಧ್ರ ಪ್ರದೇಶ ರಾಜ್ಯದ ಅನಂತಪುರ - ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ 8,447 ಚ.ಕಿ.ಮೀ. ಮತ್ತು ವಾರ್ಷಿಕ ಮಳೆ ಕೇವಲ 63.9 ಸೆ.ಮೀ. ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ. ಆದರೀಗ ಅಖಂಡ ಬಳ್ಳಾರಿ ಜಿಲ್ಲೆ ಹೋಗಿ ನೂತನ ವಿಜಯನಗರ ಜಿಲ್ಲೆಯಾಗಿ ಘೋಷಣೆಯಾಗಿದ್ದರಿಂದ ಎಲ್ಲವೂ ಕೂಡ ಇಬ್ಭಾಗ ಆಗಿ ಹೋಗಿ ಬಿಡುತ್ತವೆ.
ಗಣಿನಗರಿ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಸಾಕಷ್ಟು ಪ್ರಸಿದ್ದಿಯಾಗಿತ್ತು: ಬಳ್ಳಾರಿ ಮಹಾನಗರವು ಜೀನ್ಸ್ ಉದ್ಯಮಕ್ಕೆ ಖ್ಯಾತಿ ಹೊಂದಿತ್ತು. ಇದರ ಉತ್ಪನ್ನಗಳು ದೇಶ-ವಿದೇಶಕ್ಕೂ ರಫ್ತಾಗುತ್ತಿದ್ದವು. ಈ ಉದ್ಯಮಕ್ಕೆ ಅಷ್ಟೊಂದು ಪ್ರಮಾಣದ ಹೊಡೆತವಂತೂ ಕಾಣೋದಿಲ್ಲ. ಆದರೆ ಬಳ್ಳಾರಿ ಜಿಲ್ಲೆಗೆ ಕೇವಲ ಜೀನ್ಸ್ ಹಾಗೂ ಸ್ಪಾಂಜ್ ಐರನ್ ಕಂಪನಿಗಳು ಮಾತ್ರ ಉಳಿದುಕೊಳ್ಳಲಿವೆ.
ನೂತನ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರ ಅಸ್ತು: ಹೊಸಪೇಟೆ ಜಿಲ್ಲಾ ಕೇಂದ್ರವನ್ನಾಗಿಸಿಕೊಂಡು ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳು ಸೇರಲಿವೆ. ಬಳ್ಳಾರಿ ಜಿಲ್ಲಾ ಕೇಂದ್ರವನ್ನಾಗಿಸಿಕೊಂಡು ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಹಾಗೂ ಸಂಡೂರು ತಾಲೂಕುಗಳು ಇರಲಿವೆ. ಆದರೆ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ಕಂಪ್ಲಿ ತಾಲೂಕನ್ನು ನೂತನ ವಿಜಯನಗರ ಜಿಲ್ಲೆಯಿಂದ ಹೊರಗಿಟ್ಟಿರೋದಕ್ಕೆ ಈಗ ಎಲ್ಲೆಡೆ ಅಪಸ್ವರ ಕೇಳಿ ಬಂದಿದೆ.
ಚಾರಿತ್ರಿಕವಾಗಿ, ಭೌಗೋಳಿಕವಾಗಿ ಕಂಪ್ಲಿ ತಾಲೂಕು ಹೊಸಪೇಟೆ ಜೊತೆ ಬೆಸೆದುಕೊಂಡಿತ್ತು. ವಿಜಯನಗರ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆದದ್ದೇ ಕಂಪ್ಲಿಯ ಕಂಪೀಲರಾಯ ದೊರೆ. ಆತನಿಂದಲೇ ಕಂಪ್ಲಿ ಹೆಸರು ಬಂದದ್ದು. ಭೌಗೋಳಿಕವಾಗಿ ಕಂಪ್ಲಿ ಜಿಲ್ಲಾ ಕೇಂದ್ರ ಹೊಸಪೇಟೆಗೆ ಹತ್ತಿರವಿದೆ. ಎರಡೂ ಪಟ್ಟಣಗಳ ನಡುವೆ 32 ಕಿ.ಮೀ. ಅಂತರವಿದೆ. ಬಳ್ಳಾರಿ–ಕಂಪ್ಲಿ ನಡುವೆ 51 ಕಿ.ಮೀ. ದೂರವಿದೆ. ಈ ಕಾರಣಕ್ಕಾಗಿಯೇ ಕಂಪ್ಲಿಯ ಮುಖಂಡರು ಆರಂಭದಿಂದಲೂ ತಮ್ಮ ತಾಲೂಕು ನೂತನ ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಹಕ್ಕೊತ್ತಾಯ ಮಂಡಿಸುತ್ತಿದ್ದರು.
ವಿಜಯನಗರದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆಯಾಗಬೇಕೆಂದು ಕನಸು ಕಂಡು, ಅದಕ್ಕಾಗಿ ಮೊದಲು ಶ್ರಮಿಸಿದವರು ಕಂಪೀಲರಾಯ ದೊರೆ. ಅನಂತರ ಆನೆಗೊಂದಿ ಹಂಪಿಗೆ ಸ್ಥಳಾಂತರಗೊಂಡಿತು. ಹೊಸಪೇಟೆ, ಹಂಪಿ, ಆನೆಗೊಂದಿ, ಕಮಲಾಪುರ ಹಾಗೂ ಕಂಪ್ಲಿ ವಿಜಯನಗರದ ಭಾಗಗಳು. ಆನೆಗೊಂದಿ ತುಂಗಭದ್ರಾ ನದಿ ಆಚೆಗಿರುವ ಕಾರಣಕ್ಕಾಗಿಯೇ ಕೊಪ್ಪಳ ಜಿಲ್ಲೆಗೆ ಸೇರಿಸಲಾಗಿದೆ. ಆದರೆ, ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿಸುತ್ತಿರೋದು ಒಳ್ಳೆಯದಲ್ಲ. ಇದರಿಂದ ಚರಿತ್ರೆಗೆ ದ್ರೋಹ ಬಗೆದಂತಾಗುತ್ತದೆ ಎಂಬುದು ಇತಿಹಾಸಕಾರರ ವಾದವಾಗಿದೆ.