ಹೊಸಪೇಟೆ(ಬಳ್ಳಾರಿ):ನಗರಸಭೆ ಅಧಿಕಾರಿಗಳು ಕೊರೊನಾ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 4.51 ಲಕ್ಷ ದಂಡ ವಸೂಲಿ ಮಾಡಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವದರ ಜತೆಗೆ ಆದಾಯವನ್ನು ತಂದಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 4.51 ಲಕ್ಷ ದಂಡ ವಸೂಲಿ ಹೊಸಪೇಟೆ ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡ್ಗಳಲ್ಲಿ 2 ಲಕ್ಷ ಜನಸಂಖ್ಯೆಯಿದೆ. ಇಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ನಗರಸಭೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರಾಜ್ಯ ಸರ್ಕಾರದ ದಂಡ ವಸೂಲಿ ಮಾರ್ಗಸೂಚಿ ಅನುಸರಿಸಿ ದಂಡ ವಸೂಲಿ ಮಾಡಿದ್ದಾರೆ.
ದಂಡ ವಸೂಲಿ:ಮೇ. 6ರಿಂದ ಇಲ್ಲಿವರೆಗೂ ಕೊರೊನಾ ನಿಯಮ ಉಲ್ಲಂಘಿಸಿದ 3,732 ಜನರ ವಿರುದ್ಧ ಪ್ರಕರಣ ದಾಖಲಿಸಿ, ಬರೋಬ್ಬರಿ 4.51 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ 300 ರೂ. ಹಾಗೂ ಮಾಸ್ಕ್ ಧರಿಸದಿದ್ದರೆ 100 ರೂ. ದಂಡ ವಸೂಲಿ ಮಾಡಲಾಗುತ್ತಿದೆ.
ನಾಲ್ಕು ತಂಡ ರಚನೆ: ನಗರದಲ್ಲಿ ದಂಡ ವಸೂಲಿಗಾಗಿ ನಾಲ್ಕು ತಂಡವನ್ನು ರಚನೆ ಮಾಡಲಾಗಿತ್ತು. ಒಂದು ತಂಡದಲ್ಲಿ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಯಿದ್ದರು. ವಿಜಯನಗರ ಕಾಲೇಜ್ ರಸ್ತೆ, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ಮೇನ್ ಬಜಾರ್, ಬಳ್ಳಾರಿ ರಸ್ತೆ ವೃತ್ತ ಜನರಿಂದ ದಂಡ ವಸೂಲಿ ಮಾಡಲಾಗಿದೆ. ನಗರಸಭೆಯ ಅಧ್ಯಕ್ಷೆ ಜಯಲಕ್ಷ್ಮಿ ಅವರು ಸಹ ದಂಡ ವಸೂಲಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅವರಿಗೆ ನಗರಸಭೆಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಕುಮಾರ್, ಎಲೆಕ್ಟ್ರಿಷನ್ ಗ್ರೇಡ್-01 ಕೊಟ್ರೇಶ್, ವೀಣಾ, ಸತ್ಯನಾರಾಯಣ ಶರ್ಮಾ, ಈರಣ್ಣ, ಮಾರುತಿ ದಂಡ ಸಾಥ್ ನೀಡಿದ್ದರು. ನಗರಸಭೆಯ ಅಧಿಕಾರಿಗಳೊಂದಿಗೆ ಪೊಲೀಸ್ ಇಲಾಖೆ ಕೂಡ ಕೈ ಜೋಡಿಸಿತ್ತು.
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ: ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ದಿನಕ್ಕೆ 200 ಪ್ರಕರಣಗಳು ದಾಖಲಾಗುತ್ತಿದ್ದವು. ಆದದ್ರೀಗ 61ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ. ನಗರಸಭೆ ಅಧಿಕಾರಿಗಳಿಂದ ಜನರಲ್ಲಿ ಜಾಗೃತಿ ಮೂಡಿದೆ. ಸಾರ್ವಜನಿಕರು ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.