ಬಳ್ಳಾರಿ: ನೆರೆ ಹಾವಳಿಗೆ ಕೇಂದ್ರ ಸರ್ಕಾರ ತಕ್ಷಣವೇ126 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮೊಳಕಾಲ್ಮೂರ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.
ಜಿಲ್ಲೆಯ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯದ ವೈಕುಂಠ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದ 80 ತಾಲೂಕುಗಳಲ್ಲಿ ನೆರೆ ಹಾವಳಿಯಿದೆ. ಜನ-ಜಾನುವಾರುಗಳಿಗೆ ಪ್ರಾಣಹಾನಿ ಉಂಟಾಗಿ ಅತೀವ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರದಿಂದ 126 ಕೋಟಿ ರೂ. ಪರಿಹಾರ.. ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ನೆರೆ ಪರಿಹಾರಕ್ಕಾಗಿ 2000 ಕೋಟಿ ರೂ.ಬೇಡಿಕೆ ಇಡಲಾಗಿದೆ. ಅದಕ್ಕೆ ಅವರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ, ಖುದ್ದಾಗಿ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ನೆರೆ ಹಾವಳಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದರು.
42 ವರ್ಷದ ಬಳಿಕ ರಾಜ್ಯದಲ್ಲಿ ಇಂತಹ ದೊಡ್ಡ ಅತಿವೃಷ್ಟಿ ಆವರಿಸಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅಲ್ಲದೇ, ರಾಜ್ಯದ ನೆರೆ ಹಾವಳಿ ಕುರಿತು ಸಮಗ್ರ ವರದಿ ಸಂಗ್ರಹಿಸಲು ನಾಲ್ಕು ತಂಡಗಳನ್ನು ರಚನೆ ಮಾಡಲಾಗುವುದು. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.