ಬೆಳಗಾವಿ:ಗಲಭೆಗೆ ಕಾರಣವಾಗುತ್ತಿರುವ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಬೆಳಗಾವಿಯ ಡಿಸಿ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಮ್ಮ ಶಾಸಕನ ಮನೆ ಮೇಲೆ ದಾಳಿಯಾದರೂ ಕಾಂಗ್ರೆಸ್ ಮೌನ: ವಿಹೆಚ್‌ಪಿ ಕಿಡಿ ವಿಹೆಚ್‌ಪಿ ಮುಖಂಡ ಕೃಷ್ಣ ಭಟ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಗೆ ಕಾರಣವಾದ ಎಸ್.ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು. ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆ ಖಂಡನೀಯ. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿ, ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಹೆಚ್‌ಪಿ ಮುಖಂಡ ಕೃಷ್ಣ ಭಟ್, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಗೆದ್ದಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಹಾನಿಗೊಳಿಸಲಾಗಿದೆ. ತನ್ನ ಶಾಸಕನ ಬೆಂಬಲಕ್ಕೆ ನಿಲ್ಲಬೇಕಿದ್ದ ಕಾಂಗ್ರೆಸ್ ನಾಯಕರು ಮೌನವಹಿಸಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಬೆಂಬಲಕ್ಕೆ ವಿಶ್ವ ಹಿಂದೂ ಪರಿಷತ್ ಇರುತ್ತದೆ. ತಪ್ಪು ಮಾಡಿದವರ ವಿರುದ್ಧ ಶ್ರೀನಿವಾಸ ಮೂರ್ತಿ ಕೇಸ್ ದಾಖಲಿಸಲಿ ಎಂದರು.
ದಲಿತ ಮುಖಂಡ, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿಯಾಗಿದೆ. ಕಾಂಗ್ರೆಸ್ ಪಕ್ಷದವರು ಅಖಂಡ ಶ್ರೀನಿವಾಸಮೂರ್ತಿಗೆ ಸಹಕಾರ ನೀಡಬೇಕು. ಅನ್ಯಾಯ ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಯ್ದೆ ತರಬೇಕು. ಗಲಭೆ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.