ಬೆಳಗಾವಿ: ಕಬಲಾಪುರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿ ಜಲಾವೃತವಾಗಿರುವ ಮನೆ ಹಾಗೂ ನಂತರ ಮರ ಏರಿ ಕುಳಿತ್ತಿದ್ದ ದಂಪತಿಯನ್ನು 48 ಗಂಟೆಗಳ ಬಳಿಕ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.
ಹೇಗಿದ್ದವು ಆ ಮೂರು ಕರಾಳ ದಿನಗಳು.. ನರಕದಿಂದ ಪಾರಾಗಿ ಬಂದ ದಂಪತಿ ಹೇಳೋದೇನು?
ಮೂರು ದಿನಗಳ ಕಾಲ ಪ್ರವಾಹದಲ್ಲಿ ಸಿಲುಕಿದ್ದ ಕಬಲಾಪುರ ಗ್ರಾಮದ ರತ್ನಬಾಯಿ ಗಿವಾರಿ, ಕಾಡಪ್ಪ ಗಿವಾರಿ ದಂಪತಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿ ಈಟಿವಿ ಭಾರತ್ ಜೊತೆ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಮೂರುದಿನಗಳ ಹಿಂದೆ ಊಟ ಮಾಡಿ ಮನೆಯಲ್ಲಿ ಕುಳಿತಿದ್ದೆವು. ಏಕಾಏಕಿ ಪ್ರವಾಹಕ್ಕೆ ಮನೆ ಮುಳಗಿತು. ಒಂದು ದಿನ ಮನೆಯ ಛಾವಣಿ ಮೇಲೆ ಕುಳಿತು ಕಾಲ ಕಳೆದವು. ನೀರಿನ ರಭಸಕ್ಕೆ ಮನೆಯೂ ಕುಸಿಯಿತು. ಹಗ್ಗದ ಸಹಾಯದಿಂದ ಎರಡು ದಿನ ಮರ ಏರಿ ಕುಳಿತೆವು. ಬದುಕಿ ಬರುತ್ತೇವೆಂಬ ವಿಶ್ವಾಸ ನಮಗಿರಲಿಲ್ಲ. ಆದರೆ ನಮ್ಮನ್ನು ರಕ್ಷಿಸಿದ ರಕ್ಷಣಾ ತಂಡ ಹಾಗೂ ಸರ್ಕಾರಕ್ಕೆ ಋಣಿ ಆಗಿದ್ದೇವೆ ಎಂದು ಪ್ರವಾಹದಲ್ಲಿ ಸಿಲುಕಿ ಪಾರಾಗಿ ಬಂದ ರತ್ನಬಾಯಿ ಗಿವಾರಿ ಹೇಳಿದರು.
ಮೂರು ದಿನ ಜೀವ ಕೈಯಲ್ಲಿ ಹಿಡಿದು ಬದುಕಿದ್ದೆವು. ಮತ್ತೊಮ್ಮೆ ಹುಟ್ಟಿ ಬಂದೆ ನಾನು ಎಂದು ರತ್ನಾಭಾಯಿ ಪತಿ ಕಾಡಪ್ಪ ಗಿವಾರಿ ಹೇಳಿದ್ದಾರೆ.