ಚಿಕ್ಕೋಡಿ:ದೂಧಗಂಗಾ ನದಿ ಸುತ್ತುವರೆದ ಪರಿಣಾಮ ಬದನೆಕಾಯಿ ತೋಟದ ವಸತಿ ಜನರು ಪರದಾಡುವಂತಾಗಿದೆ. ಕಳೆದ ಐದು ದಿನಗಳಿಂದ ರಕ್ಷಣೆಗಾಗಿ 100ಕ್ಕೂ ಹೆಚ್ಚು ಕುಟುಂಬಗಳು ಅಂಗಲಾಚುತ್ತಿವೆ. ದೂಧಗಂಗಾ ನದಿಯಲ್ಲಿ ಮೊಸಳೆಗಳು ಇರುವುದರಿಂದ ಕುಟುಂಬಗಳು ಪ್ರಾಣ ಭೀತಿಯಲ್ಲಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ, ಬದನೆಕಾಯಿ ತೋಟದ ವಸತಿ, ಕಣಗಲೆ ತೋಟದ ವಸತಿ, ಪಟಾಣಖೋಡಿ ತೋಟದ ವಸತಿ ಪ್ರದೇಶದ ಜನರ ರಕ್ಷಣೆಗಾಗಿ ಹೆಲಿಕಾಪ್ಟರ್ ಕಳುಹಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಹೇಳಿ ಒಂದು ದಿನ ಕಳೆದರೂ ಹೆಲಿಕಾಪ್ಟರ್ ಬಂದಿಲ್ಲ.
ನದಿ ಮಧ್ಯೆ ಸಿಲುಕಿಹಾಕಿಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಡುಗಡ್ಡೆ ಪ್ರದೇಶದಲ್ಲಿ ಸಿಲುಕಿದ ಮೂರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕ್ಷಣದಿಂದ ಕ್ಷಣಕ್ಕೆ ದೂಧಗಂಗಾ ನದಿ ನೀರು ಏರುತ್ತಿದೆ. ಹಾಗಾಗಿ ಏರ್ ಲಿಫ್ಟ್, ಹೆಲಿ ಲಿಫ್ಟ್ ಮಾಡಿ ಸ್ಥಳಾಂತರಕ್ಕೆ ಸಂತ್ರಸ್ತರ ಆಗ್ರಹಿಸುತ್ತಿದ್ದರು. ಜಿಲ್ಲಾಡಳಿತ ಮಾತ್ರ ಇತ್ತ ಬಂದಿಲ್ಲ. ಹಾಗಾಗಿ ಸಂತ್ರಸ್ತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕೃತಿ ವಿಕೋಪಕ್ಕೆ ಜನಜೀವನ ಅಸ್ತವ್ಯಸ್ಥ:
ಮಹಾರಾಷ್ಟ್ರದ ಕೋಂಕಣ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮತ್ತು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 14ಕ್ಕೂ ಹೆಚ್ಚು ನದಿ ತಟದ ಹಳ್ಳಿಗಳು ಜಲಾವೃತಗೊಂಡಿವೆ. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು, ಪ್ರತಿ ಗಂಟೆಗೆ ನೀರಿನ ಪ್ರಮಾಣ ಹೆಚ್ಚುತ್ತಿದೆ.