ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಜೂನ್ 12ರಂದು ಬೆಳಗ್ಗೆ 6ರಿಂದ ಜೂನ್ 14ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್-19 ಹರಡುವುದನ್ನು ತಡೆಯಲು ಜೂನ್ 14ರ ಬೆಳಗ್ಗೆ 6ಗಂಟೆಯವರೆಗೆ ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವುದನ್ನು ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144ರಡಿ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ :ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧಿ ಪೂರೈಕೆ ಮತ್ತು ಖರೀದಿಗೆ ಹಾಗೂ ಆನ್‌ಲೈನ್ ಫುಡ್ ಸರ್ವಿಸಸ್‌ಗಳಿಗೆ ಮಾತ್ರ ಅವಕಾಶವಿದೆ. ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಸಭೆಗೆ ಹಾಜರಾಗಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶಿಸಿದ್ದಾರೆ.
ರೈತ ಸಂಬಂಧಿ ಚಟುವಟಿಕೆಗಳಿಗೆ ಅವಕಾಶ :ಲಾಕ್‌ಡೌನ್ ಷೋಷಿಸಿರುವ ದಿನಗಳಂದು ಸಾರ್ವಜನಿಕ ವಿತರಣಾ ಪದ್ದತಿಯಡಿ ಬರುವ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6 ರಿಂದ ಬೆಳಗ್ಗೆ 10ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಅದೇ ರೀತಿ, ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆದು ಬೀಜ ಹಾಗೂ ರಸಗೊಬ್ಬರಗಳನ್ನು ವಿತರಿಸಲು ಅವಕಾಶವಿರುತ್ತದೆ.
ಪ್ರತಿ ಗ್ರಾಮದಿಂದ 5 ಜನರಿಗೆ ಮಾತ್ರ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳಿಗೆ ಹೋಗಲು ಅವಕಾಶವಿರುತ್ತದೆ. ಬೆಳಗಾವಿ ನಗರದಲ್ಲಿ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರಗಳ ಮಾರಾಟ ಮಳಿಗೆಗಳು ಲಾಕ್‌ಡೌನ್ ದಿನಗಳಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶವಿದೆ.
ಅಲ್ಲಿಗೆ ತೆರಳುವ ರೈತರು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಗ್ರಾಮಲೆಕ್ಕಿಗರ ಅನುಮತಿ ಪಡೆಯಬೇಕು. ಅಲ್ಲದೇ, ಆದೇಶದಲ್ಲಿ ಸೂಚಿಸಿರುವ ದಿನಗಳಂದು ಈಗಾಗಲೇ ಪೂರ್ವಾನುಮತಿ ಪಡೆದು ನಿಗದಿಪಡಿಸಿರುವಂತಹ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದ್ದಾರೆ. ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.