ಬೆಳಗಾವಿ:ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬುಧವಾರ ರಾತ್ರಿ ನಡೆದ ಕಲ್ಲು ತೂರಾಟ ಹಾಗೂ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಠಾಣೆ ಪೊಲೀಸರು 14 ಆರೋಪಿಗಳನ್ನು ಬಂಧಿಸಿದ್ದಾರೆ.
ಬೀಮ್ಸ್ ಆಸ್ಪತ್ರೆ ಮೇಲೆ ಕಲ್ಲು ತೂರಾಟ, ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ ಪ್ರಕರಣ: 14 ಮಂದಿ ಆರೋಪಿಗಳು ಅರೆಸ್ಟ್ ನಿನ್ನೆ ರಾತ್ರಿ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಕೊರೊನಾ ರೋಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಕೋಪಗೊಂಡ ಮೃತ ವ್ಯಕ್ತಿಯ ಸಂಬಂಧಿಕರು ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿ, ಪೊಲೀಸ್ ಜೀಪ್ ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಡಿದ್ದರು. ಜೊತೆಗೆ ಬಿಮ್ಸ್ ಆಸ್ಪತ್ರೆಯೊಳಗೆ ನುಗ್ಗಿದ ಕೆಲವರು ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಆಸ್ಪತ್ರೆ ನಿರ್ದೇಶಕರು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅಲ್ಲದೇ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಮ್ಸ್ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ 14 ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ 2 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಪೂರ್ವ ನಿಯೋಜಿತ ಕೃತ್ಯವೇ?:ತಡರಾತ್ರಿ ನಡೆದ ಕಲ್ಲು ತೂರಾಟ ಹಾಗೂ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿರುವ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. 20ಕ್ಕೂ ಅಧಿಕ ಜನರು ಏಕಾಏಕಿ ಕಲ್ಲು ತೂರಿದ್ದಾರೆ. ಬಿಮ್ಸ್ ಎದುರು ಕಾಂಕ್ರೀಟ್ ರಸ್ತೆಯಿದ್ದು, ಇಷ್ಟೊಂದು ಪ್ರಮಾಣದಲ್ಲಿ ಕಲ್ಲು ಎಲ್ಲಿಂದ ಬಂದವು. ಕೃತ್ಯ ನಡೆಸಲು ದುಷ್ಕರ್ಮಿಗಳು ಮೊದಲೇ ಕಲ್ಲುಗಳನ್ನು ಹಾಗೂ ಪೆಟ್ರೋಲ್ ತುಂಬಿದ್ದ ಬಾಟಲಿಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಅನುಮಾನ ಮೂಡತೊಡಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.