ಬೆಳಗಾವಿ:ಜಿಲ್ಲೆಯ ಮೂರು ದಿಕ್ಕುಗಳಲ್ಲಿ ಮೂರು ಚಿರತೆಗಳು ಕಂಡುಬಂದಿವೆ. ಚಿರತೆ ಪ್ರತ್ಯಕ್ಷವಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ 52 ಶಾಲೆಗಳಿಗೆ ಇಂದು ಜಿಲ್ಲಾಡಳಿತ ರಜೆ ಘೋಷಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಸಿ ಸೆರೆಗೆ ಮುಂದಾಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಡೂರವಾಡಿ, ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಕಬ್ಬಿನ ಗದ್ದೆ ಹಾಗೂ ಬೆಳಗಾವಿ ಜಾಧವ್ ಮಗರ, ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಆದರೆ, ಕಳೆದ ಹಲವು ದಿನಗಳಿಂದ ಚಿರತೆ ನಗರದಲ್ಲಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ.
22 ಟ್ರ್ಯಾಪ್ ಕ್ಯಾಮರಾ, ಎಂಟು ಬೋನ್ಗಳನ್ನಿರಿಸಿ ಶೋಧ ಕಾರ್ಯ ನಡೆಯುತ್ತಿದೆ. ಆದರೂ ಚಿರತೆ ಸೆರೆಯಾಗಿಲ್ಲ. ಬೆಳಗಾವಿ ನಗರದ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಸರ್ಕಾರಿ, ಖಾಸಗಿ ಶಾಲೆಗಳು ಹಾಗೂ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಸುತ್ತಮುತ್ತಲಿನ 30 ಶಾಲೆಗೆ ರಜೆ ನೀಡಲಾಗಿದೆ.
ಶೋಧ ಕಾರ್ಯ 8ನೇ ದಿನವೂ ಮುಂದುವರಿದಿದ್ದು, ಇಂದು ಮೂರು ಡ್ರೋನ್ ಕ್ಯಾಮರಾಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಮೂವ್ಮೆಂಟ್ ಕ್ಯಾಮರಾಗಳನ್ನೂ ಸಹ ಗಾಲ್ಫ್ ಮೈದಾನದಲ್ಲಿ ಫಿಕ್ಸ್ ಮಾಡಿದ್ದಾರೆ. ಗೋಕಾಕ್ ಹಾಗೂ ಬೆಳಗಾವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದಿಂದ ತಜ್ಞ ಸಿಬ್ಬಂದಿ ಆಗಮಿಸಿದ್ದಾರೆ. ಇಷ್ಟಿದ್ದರೂ ಚಿರತೆ ಪತ್ತೆಯಾಗದಿರುವುದು ಇಲಾಖೆಯ ನಿದ್ದೆಗೆಡಿಸಿದೆ.