ಬೆಳಗಾವಿ:ಸಿದ್ದರಾಮಯ್ಯ ನನ್ನ ಮಧ್ಯೆ ಮನಸ್ತಾಪದ ಪ್ರಶ್ನೆ ಇಲ್ಲ. ಅವರೊಂದಿಗೆ ಹಿಂದೆಯೂ ಇದ್ದೆವು, ಈಗಲೂ ಇದ್ದೇವೆ, ಮುಂದೆಯೂ ಇರುತ್ತೇವೆ. ಸಿದ್ದರಾಮಯ್ಯ ರಾಮದುರ್ಗ ಬಂದಾಗ ಬೇರೆ ಬೇರೆ ಕಾರ್ಯಕ್ರಮ ಇತ್ತು. ಹಾಗಾಗಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಮಧ್ಯೆ ಮನಸ್ತಾಪ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಮಧ್ಯದ ಸಂಬಂಧ ಸರಿಯಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೇನೂ ಇಲ್ಲ. ಪಕ್ಷದಲ್ಲೇ ಇರುವ ನಾವು ಹಂತ ಹಂತವಾಗಿ ಮೇಲೆ ಬರುತ್ತಿದ್ದೇವೆ. ಅವರು ನಮ್ಮ ಜೊತೆಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯ ನಮ್ಮನ್ನು ಕಡೆಗಣಿಸಿದ್ರು ಅದು ಬೇರೆ ವಿಷಯ. ಮತ್ತೆ ಕಾಲ ಬಂದೇ ಬರುತ್ತದೆ. ಅವಕಾಶಗಳು ಬಂದೇ ಬರುತ್ತವೆ. ಅವೆಲ್ಲವೂ ಆಗಿ ಹೋದಂತಹ ಘಟನೆಗಳು ಅವುಗಳ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್ನಲ್ಲಿ ನಡೆಯುತ್ತಿದೆ :ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ ಎಂದ ಡಿಕೆಶಿ ಹೇಳಿಕೆ ವಿಚಾರಕ್ಕೆ, ಸಿದ್ದರಾಮೋತ್ಸವ ಮೊದಲು ಪಕ್ಷದ ಬದಲಾಗಿ ಅಭಿಮಾನಿ ಸಂಘದಿಂದ ಮಾಡುವ ನಿರ್ಧಾರ ಆಗಿತ್ತು. ಈಗ ಅಧ್ಯಕ್ಷರು ನಾವು ಕೂಡಾ ಪಕ್ಷದಿಂದ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಸಿದ್ದರಾಮೋತ್ಸವಕ್ಕೆ ಎಷ್ಟು ಜನ ಸೇರಿಸಬೇಕು ಎನ್ನುದು ಇನ್ನೆರಡು ಮೀಟಿಂಗ್ ಬಳಿಕ ಗೊತ್ತಾಗಲಿದೆ. ಈಗಲೂ ಸಿದ್ದರಾಮೋತ್ಸವ ಪಕ್ಷದ ಬ್ಯಾನರ್ನಲ್ಲಿ ನಡೆಯುತ್ತಿಲ್ಲ. ಅಭಿಮಾನಿಗಳಿಂದ ಮಾಡುತ್ತಿದ್ದೇವೆ. ಮುಖ್ಯವಾದ ಕಾರ್ಯಕ್ರಮ ಆ.3ರಂದು ನಡೆಯಲಿದೆ. ಬೇರೆಬೇರೆ ಪಕ್ಷದ ಮುಖಂಡರ ಆಹ್ವಾನದ ಬಗ್ಗೆ ಚರ್ಚೆ ಆಗಬೇಕು. ಆ ಸಭೆ ಇದೇ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಯಾರನ್ನು ಸ್ವಾಗತಿಸಬೇಕು ಬಿಡಬೇಕು ಎನ್ನುವುದು ಸಾಮೂಹಿಕ ನಿರ್ಧಾರ ಆಗಲಿದೆ ಎಂದರು.
ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಲಿ:ಸಿದ್ದರಾಮಯ್ಯ ತಾವು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಅವರೇ ಸ್ಪಷ್ಟೀಕರಣ ಕೊಡಬೇಕು. ಅಲ್ಲಿ ನಿಲ್ಲುತ್ತಾರೆ, ಇಲ್ಲಿ ನಿಲ್ಲುತ್ತಾರೆ ಎಂದು ಹೇಳುತ್ತಾರೆ. ಅವೆಲ್ಲವೂ ಊಹಾಪೋಹಗಳಷ್ಟೇ. ಅಂತಿಮವಾಗಿ ಅದನ್ನು ಸಿದ್ದರಾಮಯ್ಯ ಅವರೇ ತೆರೆ ಎಳೆಯಬೇಕು.
ಸವದತ್ತಿಯಿಂದ ಸ್ಪರ್ಧೆ ಮಾಡುವ ನಿರ್ಧಾರ ಆದರೆ ಸ್ಥಳೀಯ ಆಕಾಂಕ್ಷಿಗಳು ಅದನ್ನು ಒಪ್ಪಲೇಬೇಕು. ಆದರೆ ಸವದತ್ತಿ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸವದತ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮದೇ ಆದ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಸಲಹೆ ಕೊಟ್ಟಿದ್ದೇವೆ. ಜನವರಿಯಲ್ಲಿ ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದರು.