ಬೆಳಗಾವಿ:ಮತಾಂತರ ನಿಷೇಧ ವಿಧೇಯಕವನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲು ಸಿದ್ಧತೆ ನಡೆಸಿದ್ದು, ಎಲ್ಲವೂ ಅಂತಿಮ ಹಂತದಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ವಿಧೇಯಕವನ್ನು ಕಾನೂನು ಇಲಾಖೆ ಇಂದು ಅಥವಾ ನಾಳೆ ಅಂತಿಮ ಮಾಡಿ ಕೊಡುತ್ತದೆ. ವಿಧೇಯಕದ ಕರಡು ಬಹುತೇಕ ಅಂತಿಮವಾಗಿದೆ. ಮಸೂದೆ ಯಾವುದೇ ವಿಷಯಾಂತರವಲ್ಲ. ಪ್ರತಿಪಕ್ಷಗಳಿಗೆ ಯಾವುದೇ ವಿಚಾರದ ಬಗ್ಗೆ ಕೇಳಿ ತಿಳಿದುಕೊಳ್ಳುವ ಹಕ್ಕಿದೆ. ಇದು ಬಹಳ ಅಗತ್ಯವಾದ ಬಿಲ್ ಎಂದು ಮನಗಂಡು ಸರ್ಕಾರ ತರುತ್ತಿದೆ ಎಂದರು.
ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಇದನ್ನೂ ಓದಿ:ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆಯನ್ನೂ ತರುತ್ತೇವೆ: ಸಚಿವ ಸುನಿಲ್ ಕುಮಾರ್
ಇದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆಯ ಪ್ರಶ್ನೆಯೇ ಬರುವುದಿಲ್ಲ. ಸಂವಿಧಾನದ 25ನೇ ವಿಧಿಯ ಪ್ರಕಾರ ಬಲವಂತದ ಮತಾಂತರ ಮಾಡಬಾರದು. ಈ ಹಿಂದಿನ ಕಾನೂನಿನಲ್ಲಿ ಮತಾಂತರ ಮಾಡಿದರೆ ಏನು ಶಿಕ್ಷೆ ಎಂಬುದರ ಬಗ್ಗೆ ಉಲ್ಲೇಖ ಇಲ್ಲ. ಅದಕ್ಕೆ ಕೆಲ ನಿಯಮಗಳನ್ನು ಜಾರಿಗೆ ತರುತ್ತೇವೆ. ಇದು ಕಣ್ಣೊರೆಸುವ ತಂತ್ರ ಅಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಲವ್ ಜಿಹಾದ್ ಕಾಯ್ದೆ ತರುವ ಪ್ರಸ್ತಾಪ ಇಲ್ಲ
ಸಚಿವ ಸುನಿಲ್ ಕುಮಾರ್ ಅವರು ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ಲವ್ ಜಿಹಾದ್ ನಿಷೇಧ ಕಾಯ್ದೆ ತರುವ ಪ್ರಸ್ತಾಪ ಇಲ್ಲ, ಸುನಿಲ್ ಕುಮಾರ್ ಯಾವ ಹಿನ್ನೆಲೆಯಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಕಾಯ್ದೆ ತರುವ ಬಗ್ಗೆ ಸದ್ಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.