ಬೆಳಗಾವಿ: ಕಳೆದ ಎರಡು ವರ್ಷಗಳಿಂದೀಚೆಗೆ ಗೈರಾಣ ಜಮೀನು ಒತ್ತುವರಿ ಮಾಡಿಕೊಂಡು ಕೆಲ ಪ್ರಭಾವಿ ವ್ಯಕ್ತಿಗಳು ಕಲ್ಲುಗಣಿಗಾರಿಕೆ ಜೊತೆಗೆ ಕೃಷಿ ಪ್ರಾರಂಭಿಸಿ ಕುರಿಗಾಹಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಹೊರವಲಯದಲ್ಲಿ ಸುಮಾರು 1,200 ಎಕರೆ ಸರ್ಕಾರಿ ಜಾಗ ಇದೆ. ಕಟಕೋಳ ಗ್ರಾಮ ಪಂಚಾಯತಿಯ ಸರ್ವೇ ನಂಬರ್ 68, 126, 176 ಇವುಗಳಿಗೆ ಹೊಂದಿಕೊಂಡಂತೆ ಒಟ್ಟು 10 ಸರ್ವೇ ನಂಬರ್‌ಗಳ ಒಟ್ಟು 1,200 ಎಕರೆ ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಕುರಿಗಾಹಿಗಳು ದನ, ಕರು, ಕುರಿ ಮೇಯಿಸುತ್ತಿದ್ದರು.
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪ ಆದರೆ, 'ಕಳೆದ ಎರಡು ವರ್ಷಗಳಿಂದ ಗ್ರಾಮದ ಕೆಲವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಲ್ಲಿರುವ ಕಲ್ಲುಗಳನ್ನು ಪಕ್ಕದಲ್ಲೇ ಇರುವ ಎಂ ಸ್ಯಾಂಡ್ ಘಟಕಕ್ಕೆ ಸಾಗಿಸುತ್ತಿದ್ದಾರೆ. ಜೊತೆಗೆ ನಾವು ಕುರಿಗಳನ್ನು ಮೇಯಿಸಲು ಹೋದರೆ ಕುರಿಗಳ ಮೇಲೆ ಕಲ್ಲು ಎಸೆಯುತ್ತಾ ದಬ್ಬಾಳಿಕೆ ಮಾಡುತ್ತಿದ್ದಾರೆ' ಎಂದು ಬಡ ಕುರಿಗಾಹಿಗಳು ಆರೋಪಿಸಿದ್ದಾರೆ.
ಇನ್ನು ಕಟಕೋಳ ಗ್ರಾಮದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವುಗೊಳಿಸಿ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಸೆಪ್ಟೆಂಬರ್ 2ರಂದು ಬೆಳಗಾವಿ ಡಿಸಿ ಕಚೇರಿ ಮುಂಭಾಗ ಕುರಿಗಾಹಿಗಳು ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೆ ಸ್ಥಳೀಯ ತಾಲೂಕು ಆಡಳಿತ, ಶಾಸಕ ಮಹಾದೇವಪ್ಪ ಯಾದವಾಡಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಒಟ್ಟಿನಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕಲ್ಲುಗಾರಿಕೆ ಮಾಡುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಜಿಲ್ಲಾಡಳಿತ ಒತ್ತುವರಿ ಜಮೀನು ತೆರವುಗೊಳಿಸಲು ಮುಂದಾಗಲಿ ಎಂಬುದು ಕುರಿಗಾಹಿಗಳ ಆಶಯ.