ಬೆಳಗಾವಿ:ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಅವಮಾನ ಪ್ರಕರಣ ಬೆನ್ನಲ್ಲೇ ಬೆಳಗಾವಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಬೀಳಿಸಿರುವ ಘಟನೆ ತಡರಾತ್ರಿ ನಡೆದಿದೆ.
ತಡರಾತ್ರಿ ಬೆಳಗಾವಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೆಡವಿ ಅಟ್ಟಹಾಸ ಮೆರೆದಿದ್ದಾರೆ. ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಸುಕಿಜಾಚ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ಅಗೌರವ ಸೂಚಿಸಿದ್ದಾರೆ. ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಓದಿ:ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ: ಬೆಳಗಾವಿಯಲ್ಲಿ ದಿಢೀರ್ ಪ್ರತಿಭಟನೆ; ಪೊಲೀಸರ ಮೇಲೆ ಕಲ್ಲು ತೂರಾಟ
ಅಧಿವೇಶನದ ಸಮಯದಲ್ಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದ್ದು, ಪ್ರತಿಭಟನೆ ಜೊತೆಗೆ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಗೆ, ಶುಭಂ ಶಳಕೆ, ಮಾಜಿ ಮೇಯರ್ ಸರಿತಾ ಪಾಟೀಲ ಸೇರಿ ಎಂಇಎಸ್ ಪುಂಡರು ಸಾಥ್ ನೀಡಿದ್ದರು ಎನ್ನಲಾಗ್ತಿದೆ.
ಆದ್ರೆ ಪ್ರತಿಭಟನೆ ವೇಳೆ ಕೆಲ ಎಂಇಎಸ್ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಉದ್ಧಟತನ ಪ್ರದರ್ಶನ ಮಾಡಿದ್ದರು. ಕಳೆದ ರಾತ್ರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿರುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಫೋರ್ಸ್ ಕರೆಸಿಕೊಳ್ಳಲಾಗಿತ್ತು. ನಗರದ ಎಲ್ಲೆಡೆ ಪೆಟ್ರೋಲಿಂಗ್ ಆರಂಭ ಮಾಡಲಾಗಿತ್ತು. ಆದ್ರೂ ಪೊಲೀಸರ ಪೆಟ್ರೋಲಿಂಗ್ ಮಧ್ಯೆಯೂ ಈ ಘಟನೆ ನಡೆದಿರುವುದು ವಿಪರ್ಯಾಸ.