ಬೆಳಗಾವಿ:ಕಾರು ಚಾಲಕನ ಜತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಆತ ಮತ್ತು ಸ್ನೇಹಿತರೊಂದಿಗೆ ಯೋಧನಾಗಿರುವ ಪತಿಯನ್ನೇ ಹತ್ಯೆ ಮಾಡಿರುವ ಆರೋಪಿಗಳನ್ನು ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೊನ್ನಿಹಾಳ ಗ್ರಾಮದ ಯೋಧ ದೀಪಕ್ ಪಟ್ಟಣದಾರ (32) ಮೃತ ವ್ಯಕ್ತಿ. ಘಟನೆ ನಡೆದು 25 ದಿನಗಳ ಬಳಿಕ ಯೋಧನ ಪತ್ನಿ ಅಂಜಲಿ, ಕಾರು ಡೈವರ್ ಪ್ರಶಾಂತ ಪಾಟೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ನಡೆದಿದ್ದು ಯಾವಾಗ:ಅನೈತಿಕ ಸಂಬಂಧ ಹೊಂದಿದ್ದ ವಿಷಯ ಯೋಧನ ಕುಟುಂಬದ ಸದಸ್ಯರಿಗೆ ಗೊತ್ತಾಗಿದ್ದು, ದೀಪಕ್ ಹಾಗೂ ಅಂಜಲಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಆಗ ಪ್ರಶಾಂತ ಹಾಗೂ ಅಂಜಲಿ ಸೇರಿ ದೀಪಕ್ ಕೊಲೆಗೆ ಸಂಚು ರೂಪಿಸಿದ್ದರು. ರಜೆಗೆಂದು ಬಂದಿದ್ದ ದೀಪಕ್ ಜತೆಗೆ ಜನವರಿ 28ರಂದು ಪಾರ್ಟಿ ಆಯೋಜಿಸಿದ್ದ ಪ್ರಶಾಂತ ಸ್ನೇಹಿತರು, ಯೋಧನಿಗೆ ಕಂಠಪೂರ್ತಿ ಕುಡಿಸಿದ್ದರು. ಬಳಿಕ ಯೋಧನನ್ನು ಗೋಕಾಕ್ ತಾಲೂಕಿನ ಗೋಡಚಿನ ಮಲ್ಕಿ ಬಳಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿ, ಯಾರಿಗೂ ಕಾಣದಂತೆ ಶವ ಎಸೆದು ಬಂದಿದ್ದರು.
ಬಳಿಕ ಫೆ.4ರಂದು ಮಾರಿಹಾಳ ಠಾಣೆಗೆ ಆಗಮಿಸಿರುವ ಅಂಜಲಿ, ಜ.28ರಂದು ಬೆಳಗಾವಿಗೆ ಹೋಗಿದ್ದ ಪತಿ ಮರಳಿ ಬಂದಿಲ್ಲ ಎಂದು ಕಾಣೆಯಾದ ಬಗ್ಗೆ ದೂರು ನೀಡಿದ್ದಾಳೆ. ಆದರೆ, ಮಾರಿಹಾಳ ಠಾಣೆಗೆ ಆಗಮಿಸಿದ ಯೋಧನ ಸಹೋದರ ಉದಯ್ ಕೊಲೆ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಅಂಜಲಿ, ಚಾಲಕ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಾರಿಹಾಳ ಠಾಣೆಯ ಪೊಲೀಸರು ಅಂಜಲಿ, ಪ್ರಶಾಂತನನ್ನು ವಶಕ್ಕೆ ಪಡೆದಾಗ ಈ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಚಾಲಕನ ಸ್ನೇಹಿತರಾದ ನವೀನ ಕೆಂಗೇರಿ ಹಾಗೂ ಪ್ರವೀಣ ಹುಡೇದ್ ಪರಾರಿಯಾಗಿದ್ದಾರೆ. ಬಂಧಿತರ ಜತೆಗೆ ಹತ್ಯೇಗೀಡಾದ ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಕೊಲೆಯಾದ ದೀಪಕ್ ಶವದ ಮೂಳೆ ಸೇರಿದಂತೆ ಇನ್ನಿತರ ಸಾಕ್ಷ್ಯಗಳು ದೊರೆತಿವೆ.