ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ನಿರಂತರ ಮತ್ತು ಭಾರಿ ಮಳೆಯಿಂದಾಗಿ ಮತ್ತು ಅಲ್ಲಿನ ಕೃಷ್ಣಾ ನದಿಯ ಪಾತ್ರದ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಉಂಟಾಗಿದೆ. ಅಲ್ಲದೆ, ನದಿಗಳು ಮೈತುಂಬಿ ಹರಿಯುತ್ತಿವೆ.
ಅದೇ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿಗೆ ಬಾರಿ ಪ್ರಮಾಣ ನೀರು ಬರುತ್ತಿರುವುದರಿಂದ ಈ ನದಿ ಮೈದುಂಬಿ ಹರಿಯುತ್ತಿದೆ. ಇದರ ಪರಿಣಾಮ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದೆ.
ಅಷ್ಟೇ ಅಲ್ಲದೆ, ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ನದಿಯ ತೀರದ ಸುತ್ತಲಿನ ಗ್ರಾಮಗಳಿಗೂ ಜಿಲ್ಲಾಡಳಿತಹೈ ಅಲರ್ಟ್ ಘೋಷಿಸಿದೆ. ಸಮೀಪದ ಗಂಜಿ ಕೇಂದ್ರಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಹಿರಣ್ಯಕೇಶಿ ದಡದ ಶಂಕರಲಿಂಗ, ಹೋಳೆಮ್ಮಾದೇವಿ ದೇವಾಲಯ ಜಲಾವೃತಗೊಂಡಿದ್ದು ನದಿ ತೀರದ ಗ್ರಾಮಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಮೈ ತುಂಬಿ ಹರಿಯುತ್ತಿದೆ ಹೀರಣ್ಯಕೇಶಿ ನದಿ ಜಿಲ್ಲೆಯ ಅಥಣಿ ತಾಲೂಕಿನ ಬನಜವಾಡ ಗ್ರಾಮಕ್ಕೂ ಪ್ರವಾಹದ ಭೀತಿ ಎದುರಾಗಿದ್ದು, ಮನೆಯ ಸಾಮಗ್ರಿಗಳನ್ನು, ಜಾನುವಾರುಗಳನ್ನು ಸಾಗಿಸಬೇಕಾದರೆ ಐದಾರು ಕಿ.ಮೀ ನಡೆದು ಹೋಗಬೇಕು. ವಾಹನದಲ್ಲಿ ಹೋಗಬೇಕೆಂದರೆ ರಸ್ತೆ ಇಲ್ಲ. ಇದು 35 ವರ್ಷಗಳ ಗೋಳು. ಮಳೆಗಾಲ ಆರಂಭವಾದರೆ, ನಮ್ಮ ಪಾಡು ಹೇಳತೀರದು ಎಂದು ಗ್ರಾಮಸ್ಥರು ತಮ್ಮ ಅಳಲು ಹಂಚಿಕೊಂಡಿದ್ದಾರೆ. ಮೂರ್ನಾಲ್ಕು ದಿನಗಳಿಂದ ನದಿ ತೀರದ ಗ್ರಾಮಗಳನ್ನು ಸ್ಥಳಾಂತರಿಸಿ ಎಂದು ಬಾಯಿ ಮಾತಲ್ಲಿ ಮಾತ್ರ ಹೇಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಇತ್ತ ಗಮನವೇ ಹರಿಸುತ್ತಿಲ್ಲ. ಇಲ್ಲಿ ಸಾವು-ನೋವು ಸಂಭವಿಸಿದರೂ ಅಧಿಕಾರಿಗಳು ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ಶಾಸಕರೂ ಕಣ್ಣೇತಿಯೂ ಸಹ ನೋಡಿಲ್ಲ. ಗೆಳೆಯರ ಸಹಾಯದ ಮೂಲಕ ಮನೆಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದೇವೆ ಎಂದು ಯುವಕರು ತಮ್ಮ ನೋವನ್ನು 'ಈಟಿವಿ ಭಾರತ' ಜೊತೆ ಹಂಚಿಕೊಂಡಿದ್ದಾರೆ.