ಬೆಳಗಾವಿ:ತಾಲೂಕಿನ ಹಿರೇಬಾಗೇವಾಡಿ, ಬೆಳಗುಂದ ಗ್ರಾಮದಲ್ಲಿ ಮತ್ತು ನಗರದ ಕ್ಯಾಂಪ್ನ ಕಸಾಯಿ ಗಲ್ಲಿಯ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಹಾಗೂ ಮುಂದಿನ ಆದೇಶವಾಗುವವರೆಗೆ ನಿಷೇಧಿತ ಪ್ರದೇಶ(ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಸೋಂಕು ದೃಢ: ಬೆಳಗಾವಿಯ ಈ ಪ್ರದೇಶಗಳನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದ DC - Belgaum Containment Zone
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಬೆಳಗುಂದ ಗ್ರಾಮ ಮತ್ತು ಬೆಳಗಾವಿ ನಗರದ ಕ್ಯಾಂಪ್ನ ಕಸಾಯಿ ಗಲ್ಲಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ, ಈ ಗ್ರಾಮ ಮತ್ತು ಕಸಾಯಿ ಗಲ್ಲಿಯ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
![ಸೋಂಕು ದೃಢ: ಬೆಳಗಾವಿಯ ಈ ಪ್ರದೇಶಗಳನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದ DC Containment Zone](https://etvbharatimages.akamaized.net/etvbharat/prod-images/768-512-6656037-thumbnail-3x2-jayaajpg.jpg)
ಈ ಮೂರೂ ಪ್ರದೇಶಗಳ ನಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಗ್ರಾಮವನ್ನು ನಿಷೇಧಿತ ಪ್ರದೇಶ (Containment Zone) ಎಂದು ಘೋಷಿಸಲಾಗಿದೆ. ಅದರಂತೆ ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು (Buffer Zone) ಎಂದು ಘೋಷಿಸಲಾಗಿದೆ. ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಜನರು ಕಾಲ್ನಡಿಗೆ ಮತ್ತು ಇನ್ಯಾವುದೋ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಕರ್ತವ್ಯನಿರತ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಈ ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶವಾಗುವರೆಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿಕೊಂಡು ಬರಬೇಕು. ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ನಿವಾಸಿಗಳು ತಮ್ಮ ಬಡಾವಣಿಯ ಓಣಿಯ ಗಲ್ಲಿಯಲ್ಲಿ ಶುಚಿತ್ವವನ್ನು ತಪ್ಪದೆ ಕಾಪಾಡಿಕೊಂಡು ಬರಬೇಕು. ನಿಷೇಧಿತ ಪ್ರದೇಶಗಳ 3 ಕಿ.ಮೀ ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಉರುಸ್, ಮದುವೆ, ಕ್ರೀಡೆ, ಸಂತೆ, ಜಾತ್ರೆ, ಸಮ್ಮೇಳನ, ನಾಟಕೋತ್ಸವ, ವಿಚಾರಗೋಷ್ಠಿ ಮುಂತಾದವುಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.