ಬೆಂಗಳೂರು :ಸಾಮಾಜಿಕ ಪಿಡುಗಾಗಿರುವ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಉಡುಪಿ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಬಗ್ಗೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇವಲ ಪೊಲೀಸರಿಂದ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಬಂದಾಗ ಮಾತ್ರ ಇದನ್ನು ಮಟ್ಟ ಹಾಕಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಸಾಮಾಜಿಕ ಪಿಡುಗಾಗಿದೆ. ಸಮಾಜ ಜಾಗೃತವಾದರೆ ಇದನ್ನು ತಡೆಗಟ್ಟಲು ಸಾಧ್ಯ. ನಮ್ಮ ಪೊಲೀಸರು ಹಿಂದೆಂದಿಗಿಂತಲೂ ಹೆಚ್ಚಿನ ಕಾಳಜಿವಹಿಸಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದವರನ್ನು ಎನ್‌ಡಿಪಿಎಸ್ ಮತ್ತು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹೇಳಿದರು.
ಡ್ರಗ್ಸ್ ಅನ್ನು ಕೊರಿಯರ್, ವೆಬ್ ಮೂಲಕ ಮಾರಾಟ ಮಾಡುತ್ತಿದ್ದರು. ಬಿಗಿಯಾದ ಕ್ರಮಕೈಗೊಂಡಿದ್ದೇವೆ. ಇದರಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.