ಚಿಕ್ಕೋಡಿ:ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಗ್ಗೆ ಸುಳಿವು ಪತ್ತೆಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಹಿಳೆಯ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಮಾಹಿತಿ ಸಂಗ್ರಹಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಒಂಟಿ ಮಹಿಳೆ ಶೈಲಜಾ ಸುಬೇದಾರ್ ಹತ್ಯೆ ಕೊಲೆ ಕೇಸ್ ಭೇದಿಸಲು ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ತಜ್ಣರು ಪರಿಶೀಲನೆ ನಡೆಸಿದ್ದಾರೆ. ತನಿಖೆಗೆ ಚುರುಕು ನೀಡಲು ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದರು.
ಕೊಲೆಯಾದ ಮಹಿಳೆಯ ಶವ ಪರೀಕ್ಷೆ ನಡೆಸಲಾಗುವುದು. ಶೂಟ್ ಮಾಡಿದ ಗುಂಡು ದೇಹದಲ್ಲಿಯೇ ಇರಬಹುದು ಎಂದು ಶಂಕಿಸಲಾಗಿದೆ. ಅದನ್ನು ಹೊರತೆಗೆದು ತನಿಖೆ ನಡೆಸಲಾಗುತ್ತದೆ. ಹತ್ಯೆ ಮಾಡಲಾಗಿರುವ ಮಹಿಳೆಗೆ 3 ಗುಂಡುಗಳು ತಾಗಿವೆ. ಆ ಗುಂಡಿನ ದಾಳಿಯಿಂದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.