ಬೆಳಗಾವಿ: ಸಾಧಿಸುವ ಛಲ, ಗಟ್ಟಿತನದ ಆತ್ಮವಿಶ್ವಾಸವೊಂದಿದ್ದರೆ ಸಾಕು, ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜಿಲ್ಲೆಯ ಮೋಳೆ ಗ್ರಾಮದ ಜಗದೀಶ ತಾಜಾ ಉದಾಹರಣೆ. ಜಗದೀಶ 29ನೇ ವಯಸ್ಸಿನಲ್ಲೇ ಐಪಿಎಸ್ ಅಧಿಕಾರಿ ಹುದ್ದೆ ಅಲಂಕರಿಸುವ ಮೂಲಕ ಜಿಲ್ಲೆ ಮತ್ತು ಕರುನಾಡಿಗೆ ಕೀರ್ತಿ ತಂದಿದ್ದರೆ, ಈತನ ತಂದೆ-ತಾಯಿ ತಮ್ಮ ಸರಳ ಜೀವನದ ಮೂಲಕ ದೇಶಕ್ಕೆ ಮಾದರಿ ಆಗಿದ್ದಾರೆ.
ಹೌದು, ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದವರಾದ ಜಗದೀಶ ಅಡಹಳ್ಳಿ ಅವರು 2019-20ನೇ ಸಾಲಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 440ನೇ ರ‍್ಯಾಂಕ್ ಪಡೆದು ಸದ್ಯ ಐಪಿಎಸ್ ತರಬೇತಿ ಬಳಿಕ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಟ್ರೈನಿ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಧನೆಗೆ ಸ್ಫೂರ್ತಿ ಬಡತನ, ಸತತ ಓದು..
ಶ್ರೀಕಾಂತ-ಸುಮಿತ್ರಾ ಅಡಹಳ್ಳಿ ದಂಪತಿಗೆ ಕಿರಿಯ ಪುತ್ರನಾಗಿ ಜಗದೀಶ ಜನಿಸುತ್ತಾರೆ. ಶ್ರೀಕಾಂತ್ ದಂಪತಿಗೆ ನಾಲ್ವರು ಮಕ್ಕಳಿದ್ದು, ಜಗದೀಶ ಓದಿನಲ್ಲಿ ಸದಾ ಮುಂದಿದ್ದರು. ಮೋಳೆ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ 80.06ರಷ್ಟು ಅಂಕ ಪಡೆದಿದ್ದರು. ಪಿಯುಸಿಯನ್ನು ಅಥಣಿ ತಾಲೂಕಿನ ಜಾಧವಜೀ ಆನಂದಜೀ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 89ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈದರು. ಪದವಿಯನ್ನು ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ 87ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು. ಇದಾದ ಬಳಿಕ ಸಿವಿಲ್ ಸರ್ವಿಸ್‌ಗೆ ಸೇರಬೇಕೆಂದು 2014ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದರು.
ಸಾಧನೆಗೆ ಆತ್ಮವಿಶ್ವಾಸ ಅತ್ಯಮೂಲ್ಯ ಆಸ್ತಿ..
ಯಾವುದೇ ಸಾಧನೆಗೂ ಆತ್ಮವಿಶ್ವಾಸ ಎಂಬುದು ಅತ್ಯಮೂಲ್ಯ ಆಸ್ತಿಗಳಲ್ಲೊಂದು. ಇದನ್ನು ಮನಗಂಡ ಜಗದೀಶ ಆತ್ಮವಿಶ್ವಾಸವನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿಕೊಂಡು ಸದ್ಯ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿ ಉನ್ನತ ಸ್ಥಾನಕ್ಕೇರಿದ್ದಾರೆ. ಜೀವನದಲ್ಲಿ ಯಾರನ್ನೋ ಅನುಕರಿಸಿ ನಾವೇನೋ ಆಗಲು ಸಾಧ್ಯವಿಲ್ಲ. ಬೇರೆಯವರನ್ನು ಮಾದರಿಯನ್ನಾಗಿಟ್ಟುಕೊಂಡು ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕು. ಕಷ್ಟಪಡಬೇಕು. ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಇದರ ಜೊತೆಗೆ ಸಾಧಕರ ಯಶೋಗಾಥೆಗಳನ್ನು ಓದುವುದರಿಂದ ಪ್ರೇರಣೆ ದೊರಕುತ್ತದೆ. ಮನೋಬಲ ಹೆಚ್ಚುತ್ತದೆ. ಸಮಸ್ಯೆ, ಸಂಕಷ್ಟಗಳ ಸಂದರ್ಭವನ್ನು ಎದುರಿಸುವ ಆತ್ಮಸ್ಥೈರ್ಯ ನಮಗೆ ದೊರಕುತ್ತದೆ. ಇದರಿಂದ ನಾವು ಅಂದುಕೊಂಡ ಸಾಧನೆಯ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂಬುದು ಐಪಿಎಸ್ ಅಧಿಕಾರಿ ಜಗದೀಶ ಅವರ ಮಾತುಗಳು.