ಬೆಳಗಾವಿ:ನಿನ್ನೆ ಒಂದೇ ದಿನ ಮೂರು ಕಡೆ ಸರಗಳ್ಳತನ ನಡೆದ ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಇರಾನಿ ಗ್ಯಾಂಗ್ ಮತ್ತೆ ಸಕ್ರಿಯವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು ಮದುವೆಗೆ ಹೋಗುತ್ತಿದ್ದ ವೃದ್ಧ ದಂಪತಿ ತಡೆದು ಚಿನ್ನಾಭರಣ ದೋಚಿದರೆ, ಇನ್ನೊಂದೆಡೆ ಹಾಲು ತರಲು ಹೋಗಿದ್ದ ವೃದ್ಧೆಯ ಮತ್ತು ಮಹಿಳೆಯ ಕತ್ತಲಿದ್ದ ಸರವನ್ನು ಕದ್ದು ಪರಾರಿಯಾದ ಘಟನೆಗಳು ನಡೆದಿವೆ.
ಮದುವೆಗೆ ಹೊರಟಿದ್ದ ವೃದ್ಧರ ದರೋಡೆ:ಬೆಳಗಾವಿಯ ಗಣೇಶಪುರ ನಿವಾಸಿಗಳಾದ ಗಣಪತ್ ಪಾಟೀಲ್ ಎಂಬುವವರು ತಮ್ಮ ಪತ್ನಿ ಜೊತೆಗೂಡಿ ಸಂಬಂಧಿಕರ ಮದುವೆಗೆ ಹೊರಟಿದ್ದ ವೇಳೆ ಬೈಕ್ನಲ್ಲಿ ಬಂದ ಕಳ್ಳರು ತಾವು ಪೊಲೀಸ್ ಎಂದು ಹೇಳಿ ವೃದ್ಧರನ್ನು ತಡೆದಿದ್ದಾರೆ. ಈ ರಸ್ತೆಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಈ ಕಡೆ ಏಕೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ.
ಆಗ ವೃದ್ಧ ದಂಪತಿ ಆಮಂತ್ರಣ ಪತ್ರ ತೋರಿಸಿ, ನಾವು ಮದುವೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಅಲ್ಲಿಗೆ ಬಂದ ಇನ್ನೊಬ್ಬ ಈ ರಸ್ತೆಯಲ್ಲಿ ಕಳ್ಳತನ ಜಾಸ್ತಿಯಾಗಿದೆ. ಇಷ್ಟೊಂದು ಚಿನ್ನಾಭರಣ ಧರಿಸಿ ಹೋಗುತ್ತಿರುವುದೇಕೆ ಎಂದು ಕೇಳಿದ್ದಾನೆ.
ಜೊತೆಗೆ ಚಿನ್ನಾಭರಣ ಕರವಸ್ತ್ರದಲ್ಲಿ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ಸಾಲದೆಂಬಂತೆ ವೃದ್ಧ ಮಹಿಳೆಯ ಕೊರಳಿನಲ್ಲಿದ್ದ ಚಿನ್ನಾಭರಣಗಳನ್ನು ತಾನೇ ಕಳಚಿದ ಕಳ್ಳ ಕರವಸ್ತ್ರಕ್ಕೆ ಹಾಕುವಂತೆ ಹೇಳಿದ್ದಾನೆ. ಬಳಿಕ ಬೈಕಿನ ಡಿಕ್ಕಿಯಲ್ಲಿ ಕರವಸ್ತ್ರ ಇಟ್ಟಿರುವುದಾಗಿ ಹೇಳಿ ಯಾಮಾರಿಸಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.