ಬೆಳಗಾವಿ:ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಪದೇಪದೇ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆ, ಗಡಿಯಲ್ಲಿ ಎಂಇಎಸ್ ಕಿತಾಪತಿ ಬಗ್ಗೆ ಕರ್ನಾಟಕ ಪರ ವಾಸ್ತವಿಕ ಪರಿಸ್ಥಿತಿಯನ್ನು ದೇಶಕ್ಕೆ ತಿಳಿಸಲು ಪುಸ್ತಕವೊಂದನ್ನು ಹೊರತರಬೇಕೆಂದು ಕನ್ನಡಪರ ಹೋರಾಟಗಾರ, ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೂಲಕ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಪದೇಪದೇ ಕ್ಯಾತೆ ತೆಗೆಯುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಇತ್ತೀಚೆಗೆ ಕರ್ನಾಟಕ ಮರಾಠಿ ಭಾಷಿಕರು ವಾಸಿಸುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರವೇ ಅಧಿಕೃತವಾಗಿ 1956 ರಿಂದ ಇಲ್ಲಿಯವರೆಗಿನ ಗಡಿವಿವಾದ ಸಂಬಂಧ ಮಹಾರಾಷ್ಟ್ರದ ನಿಲುವುಗಳು, ಘಟನಾವಳಿಗಳ ಕುರಿತಾದ ಪುಸ್ತಕವನ್ನು ಪ್ರಕಟಿಸಿದೆ. ಇದಲ್ಲದೇ 50 ವರ್ಷಗಳ ಹಿಂದಿನ ಹಳೆಯ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಸತತವಾಗಿ ಗಡಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಾ ಬಂದಿದೆ ಎಂದು ಕಿಡಿಕಾರಿದರು.