ಬೆಳಗಾವಿ :ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷದ ಮಧ್ಯೆಯೇ ಕರ್ನಾಟಕದಲ್ಲಿ ಉರ್ದು ಯೂನಿವರ್ಸಿಟಿ ಸ್ಥಾಪಿಸುವಂತೆ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಸಲೀಂ ಖಾನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಯಲ್ಲಿ ಉರ್ದು ವಿಶ್ವವಿದ್ಯಾಲಯ ಘೋಷಿಸಬೇಕು. ಸಂಸ್ಕೃತ ವಿಶ್ವವಿದ್ಯಾಲಯ ಮಾಡಿರುವ ಸರ್ಕಾರಕ್ಕೆ ಉರ್ದು ವಿವಿ ಮಾಡುವುದು ದೊಡ್ಡದಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಉರ್ದು ಯೂನಿವರ್ಸಿಟಿ ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಸಲೀಂ ಖಾನ್ ಅವರುಉರ್ದು ವಿವಿ ಸ್ಥಾಪಿಸಲು ಆಗ್ರಹಿಸಿರುವುದು.. ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕೋರ್ಟ್ ಆದೇಶ ಬರುವವರೆಗೂ ಕಾದು ನೋಡುತ್ತಿದ್ದೇವೆ. ನಮ್ಮ ವಿರುದ್ದ ಆದೇಶ ಬಂದರೆ ಕಾನೂನು ಹೋರಾಟ ಮಾಡುತ್ತೇವೆ.
ಹಿಜಾಬ್ ವಿವಾದಕ್ಕೆ ಸರ್ಕಾರವೇ ಕಾರಣವಾಗಿದೆ. ವಿವಾದ ಬಗೆಹರಿಸುವ ಬದಲು ತೇಪೆ ಹಚ್ಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಂದು ಆರು ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಇಡೀ ರಾಜ್ಯ ಶಾಂತವಾಗಿರುತ್ತಿತ್ತು. ಈ ವಿವಾದಕ್ಕೆ ಮೂಲ ಕಾರಣವೇ ಬಿಜೆಪಿ ನಾಯಕರು, ಸಂಘ ಪರಿವಾರದವರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶೋಭಾ ಕರಂದ್ಲಾಜೆ
ಉಡುಪಿಯ ಕಾಪುನಲ್ಲಿನ ಎಸ್‌ಡಿಪಿಐ ಸದಸ್ಯರಿಂದ ವಿವಾದ ಸೃಷ್ಟಿ ಎಂಬ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ರಾಜ್ಯದ ನಾನಾ ಕಡೆಯಲ್ಲಿ ಎಸ್‌ಡಿಪಿಐ ಸದಸ್ಯರಿದ್ದಾರೆ. ಎಲ್ಲಿಯೂ ಆಗದ ವಿವಾದ ಅಲ್ಲಿ ಅಷ್ಟೇ ಆಗಿದ್ದು ಏಕೆ? ಗಲಭೆ ಯಾರು ಮಾಡಿದ್ದು ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊತ್ತಿದೆ.
ನಮ್ಮ ಪಕ್ಷ ಬೆಳೆಯುವುದನ್ನು ನೋಡಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ-ಸಂಘ ಪರಿವಾರದ ವಿರುದ್ಧ ಮಾತನಾಡುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಯಾರು ಪ್ರಚೋದನೆಗೆ ಒಳಗಾಗಬಾರದು, ಮುಸ್ಲಿಮರು ಶಾಂತಿಪ್ರಿಯರು ಎಂದು ಸಲೀಂ ಖಾನ್ ಹೇಳಿದರು.