ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಶಕ್ತಿಕೇಂದ್ರ ಸವದತ್ತಿಯ ಶ್ರೀ ರೇಣುಕಾದೇವಿಯ ಕಾಣಿಕೆ ಹುಂಡಿಯಲ್ಲಿ ಅಕ್ಟೋಬರ್ ಒಂದೇ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ 1.20 ಕೋಟಿ ರೂ. ಹಣ ಸಂಗ್ರಹವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೇ ದೇಗುಲದ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ ತಿಂಗಳೊಂದರಲ್ಲೇ ₹1.20 ಕೋಟಿ ಸಂಗ್ರಹವಾಗಿದೆ. ಅಲ್ಲದೇ 15 ಲಕ್ಷ ಮೌಲ್ಯದ ಚಿನ್ನ, 2 ಲಕ್ಷ ಮೌಲ್ಯದ ಬೆಳ್ಳಿ ಕಾಣಿಕೆಯಾಗಿ ಬಂದಿವೆ.
ಈ ಹಿಂದೆ ವರ್ಷಕ್ಕೆ ಸರಾಸರಿ 4 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಒಂದೂವರೆ ವರ್ಷ ದೇಗುಲ ಬಂದ್ ಆದ ಹಿನ್ನೆಲೆಯಲ್ಲಿ ಆದಾಯ ಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ದಾಖಲೆ ಮೊತ್ತದಲ್ಲಿ ಕಾಣಿಕೆ ಸಂಗ್ರಹವಾಗಿದೆ.
ದೇವಸ್ಥಾನದ 85 ಸಿಬ್ಬಂದಿ, ಸಿಂಡಿಕೇಟ್ ಬ್ಯಾಂಕ್‌ನ 10 ಸಿಬ್ಬಂದಿಯಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಹುಂಡಿಯಲ್ಲಿದ್ದ ಹಣದ ಎಣಿಕೆ ಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಸಮಿತಿ, ಡಿಸಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ತಹಶೀಲ್ದಾರ್ ಕಚೇರಿ, ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹಣದ ಎಣಿಕೆ ಮಾಡಲಾಗಿದೆ.
ಇದೇ ವೇಳೆ ಐದು ವರ್ಷಗಳ ಹಿಂದೆ ಅಮಾನ್ಯಗೊಂಡ ಒಂದು ಸಾವಿರ ಹಾಗೂ ಐದು ನೂರು ಮುಖಬೆಲೆಯ ನೋಟುಗಳನ್ನು ಭಕ್ತರು ಹುಂಡಿಯೊಳಗೆ ಹಾಕಿರುವುದು ಎಣಿಕೆ ವೇಳೆ ಬೆಳಕಿಗೆ ಬಂದಿದೆ.