ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನುವಾದಿಗಳಿಗೆ ಸಡ್ಡು ಹೊಡೆದು ತಮ್ಮ ಆಪ್ತನ ನೂತನ ಕಾರಿಗೆ ಸ್ಮಶಾನದಲ್ಲಿ ಚಾಲನೆ ನೀಡಿದರು.
ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಆಪ್ತನ ನೂತನ ಕಾರಿಗೆ ಚಾಲನೆ ನೀಡಿದ್ದಾರೆ. ಈ ನೂತನ ವಾಹನ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನ್ಯಾಯವಾದಿ ವಿಕ್ರಂ ಕರಣಿಂಗ್ ಎಂಬುವರಿಗೆ ಸೇರಿದೆ.
ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮನುವಾದಿಗಳಿಗೆ ಹೆದರಿ ಜೀವನ ಮಾಡುವವರು ನಾವಲ್ಲ. ಅವರಿಗೆ ಸಡ್ಡು ಹೊಡೆದು ಬದುಕುತ್ತೇವೆ. ಮೂಢನಂಬಿಕೆಯ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗ ನೂತನ ಕಾರಿಗೆ ಸ್ಮಶಾನದಲ್ಲಿ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
ಸ್ಮಶಾನದಲ್ಲಿ ಆಪ್ತನ ನೂತನ ಕಾರಿಗೆ ಸತೀಶ್ ಜಾರಕಿಹೊಳಿ ಚಾಲನೆ ಸಂಕೇಶ್ವರದ ವಿಕ್ರಂ ಎಂಬುವವರು ಸಮಾಜದಲ್ಲಿ ಬದಲಾವಣೆ ಮಾಡಬೇಕು ಎಂಬ ಉದ್ದೇಶದಿಂದ ಹೆಜ್ಜೆ ಇಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿಂದೆಯೂ ಸಹ ಸ್ಮಶಾನದಲ್ಲಿ ಕಾರಿಗೆ ಚಾಲನೆ ನೀಡಲಾಗಿತ್ತು. ಇದರಿಂದ ಪ್ರೇರಣೆಗೊಂಡು ನೂತನ ಕಾರಿಗೆ ರುದ್ರಭೂಮಿಯಲ್ಲಿ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಬದಲಾವಣೆ ಆಗುತ್ತಿದೆ ಎಂದು ಜಾರಕಿಹೊಳಿ ಹೇಳಿದರು.
ಕಾರಿನ ಮಾಲೀಕ ವಿಕ್ರಂ ಕರಣಿಂಗ್ ಮಾತನಾಡಿ, ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮೂಢನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದೇವೆ. ಅದೇ ರೀತಿ ಸ್ಮಶಾನದಲ್ಲಿ ಕಾರಿಗೆ ಚಾಲನೆ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಪ್ರಯತ್ನ ಪಡಲಾಗುತ್ತಿದೆ ಎಂದರು.