ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಮತ ಪಡೆಯಬೇಕಿದೆ. ಬೇಕಾದರೆ ಬಿಜೆಪಿ, ಜೆಡಿಎಸ್ ಸೇರಿ ಎಲ್ಲರನ್ನೂ ನಾವು ಸಂಪರ್ಕಿಸಬಹುದು. ಆದರೆ ನಮ್ಮ ಕೆಲಸ ನೋಡಿ ವೋಟ್ ಹಾಕಿ ಎಂದು ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಯಾರಿಗೆ ಬೇಕಾದ್ರೂ ಫೋನ್ ಮಾಡಬಹುದು. ಮತದಾರರಿಗೆ ಯಾವುದೇ ಪಕ್ಷದ ಸಂಬಂಧ ಇರೋದಿಲ್ಲ. ಒಳ್ಳೆಯವರಿಗೆ ಮತ ಹಾಕುತ್ತಾರೆ. ಈ ನಿಟ್ಟಿನಲ್ಲಿ ಸಂಪರ್ಕ ಏಕೆ ಮಾಡಬಾರದು? ಬಿಜೆಪಿ, ಜೆಡಿಎಸ್ ಸೇರಿ ಯಾರಿಗೆ ಬೇಕಾದ್ರೂ ಫೋನ್ ಮಾಡಬಹುದೆಂದು ಉಳಿದ ಪಕ್ಷಗಳಿಗೆ ತಿರುಗೇಟು ಕೊಟ್ಟರು.
ಕಾಂಗ್ರೆಸ್‍ನವರು ಲ್ಯಾಪ್‍ಟಾಪ್ ಹಂಚಲಿದ್ದಾರೆ ಎಂಬ ಮಾಜಿ ಶಾಸಕ ಸಂಜಯ್ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಲ್ಯಾಪ್‍ಟಾಪ್ ಹಂಚುತ್ತಿಲ್ಲ. ಆರೋಪ ಮಾಡುವುದೇ ಅವರ ಕೆಲಸವಾಗಿದೆ. ಅದು ಚುನಾವಣೆಯ ಸ್ಟ್ರಾಟಜಿ. ಆದರೆ ಜನರು ನಮ್ಮ ಪರವಾಗಿದ್ದಾರೆ, ಅವರ ಮನವೊಲಿಸಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಇನ್ನು, ಪ್ರಕಾಶ್ ಹುಕ್ಕೇರಿ ಪ್ರಭಾವಿ ನಾಯಕರು. ಅವರಿಗೆ ಯಾವ ಸರ್ಟಿಫಿಕೇಟ್ನ ಅಗತ್ಯವಿಲ್ಲ. ಅವರಿಗೆ ನಾವು ಬಲ ತುಂಬುತ್ತೇವೆ ಎಂದರು.
ಇದನ್ನೂ ಓದಿ:'ಮಕ್ಕಳಿಗೆ ಬಾಲ್ಯದಲ್ಲೇ ಸಿಗಲಿ ಭಾರತೀಯ ಧಾರ್ಮಿಕ ಸಂಸ್ಕೃತಿಯ ಪಾಠ'
ನಗರದಲ್ಲಿ ಪದವಿಗಾಗಿ ಎಂಎಲ್‍ಸಿ ಚುನಾವಣೆಗೆ ನಿಂತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರಕಾಶ್ ಹುಕ್ಕೇರಿ ಪ್ರತಿಕ್ರಿಯಿಸಿ, ಈವರೆಗೆ ಏಳು ಬಾರಿ ಗೆದ್ದಿದ್ದೇನೆ. ಐದು ಬಾರಿ ಶಾಸಕನಾಗಿ, ಒಮ್ಮೆ ಎಂಪಿ, ಒಮ್ಮೆ ಎಂಎಲ್‍ಸಿಯಾಗಿ ಪದವೀಧರರ ಸಲುವಾಗಿಯೇ ಗೆದ್ದಿದ್ದೇನೆ. ಈ ಬಾರಿ ಗೆದ್ದು ಬಂದರೆ ಶಿಕ್ಷಕರ ಪರವಾಗಿಯೂ ಕೆಲಸ ಮಾಡುತ್ತೇನೆಂದರು. ಮೀಸೆ ತೀರುವಿದರೆ ವೋಟ್ ಬರೋದಿಲ್ಲ ಎಂಬ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ ಆ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.