ಬೆಳಗಾವಿ:ನಗರದ ಹೊರವಲಯದಲ್ಲಿರುವ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ ಸತೀಶ್ ಪಾಟೀಲ್ ಕಗ್ಗೊಲೆ ವಿಷಯವನ್ನು ಕುಟುಂಬಸ್ಥರಿಗೆ ಇಂದು ಬೆಳಗ್ಗೆ ತಿಳಿಸಲಾಯಿತು. ಹೀಗಾಗಿ ಸತೀಶ್ ಪಾಟೀಲ್ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗಂಡನ ಸಾವಿನ ಸುದ್ದಿ ತಿಳಿದು ಪತ್ನಿ ಸ್ನೇಹಾ ನರಳಾಡಿದರು.
ಸತೀಶ್ ಪಾಟೀಲ್ ಧರಿಸುತ್ತಿದ್ದ ಚಪ್ಪಲಿ, ಬೈಕ್ ಹಿಡಿದು ಸ್ನೇಹಾ ಕಣ್ಣೀರಾದರು. ಗ್ರಾಮಸ್ಥರು ಸಂತೈಸಿದರು. ಗ್ರಾಮವಿನ್ನೂ ಬೂದಿಮುಚ್ಚಿದ ಕೆಂಡದಂತಾಗಿದ್ದು, ನೂರಕ್ಕೂ ಅಧಿಕ ಪೊಲೀಸರು ಠಿಕಾಣಿ ಹೂಡಿದ್ದಾರೆ.
ಗಲಾಟೆಗೆ ಕಾರಣವೇನು?:ಇನ್ನೋವಾ ಕಾರು ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನದ ಜಾಗದ ವಿಚಾರಕ್ಕೆ ಎರಡು ಬಣಗಳ ಮಧ್ಯೆ ವೈಷಮ್ಯ ಇತ್ತು. ದೇವಸ್ಥಾನ ಜಮೀನು ದೇಗುಲಕ್ಕೆ ಮರಳಿ ಸಿಗಬೇಕು ಎಂದು ಸತೀಶ್ ಪಾಟೀಲ್ ಹೋರಾಟ ಮಾಡುತ್ತಿದ್ದರು. ಸತೀಶ್ ಪಾಟೀಲ್ ಹಾಗೂ ಆನಂದ ಕುಟ್ರೆ, ನಿಲಜಕರ್ ಕುಟುಂಬ ಮಧ್ಯೆ ವೈಷಮ್ಯ ಇತ್ತು.