ಬೆಳಗಾವಿ:ಗೋಕಾಕ್ ಅಂದಾಕ್ಷಣ ಥಟ್‌ನೇ ನೆನಪಾಗೋದು ಗೋಕಾಕ್ ಫಾಲ್ಸ್ ಹಾಗೂ ಗೋಕಾಕ್ ಕರದಂಟು. ಅದರಲ್ಲೂ ಗೋಕಾಕನ ಕರದಂಟು ಅಂದ್ರೆ ವರ್ಲ್ಡ್ ಫೇಮಸ್. ಭಾರತ ಅಷ್ಟೇ ಅಲ್ಲ ಅಮೆರಿಕ, ಖತಾರ್ ಸೇರಿ ವಿದೇಶಗಳಲ್ಲೂ ಗೋಕಾಕ್ ಕರದಂಟು ರಪ್ತಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಕರದಂಟನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಶಂಕರ್ ದೇವರಮನಿ (80) ಎಂಬುವವರ ಮಾಲೀಕತ್ವದ ಸದಾನಂದ ಸ್ವೀಟ್ಸ್ ಗೋಕಾಕ್ ಕರದಂಟು ದೇಶ ವಿದೇಶಗಳಿಗೆ ರಪ್ತು ಆಗುತ್ತದೆ. ಕರದಂಟು ಗರ್ಭಿಣಿ, ಬಾಣಂತಿಯರು, ಮಕ್ಕಳು, ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರದ ರೀತಿ ಕೆಲಸ ಮಾಡುತ್ತದೆ. ಕರದಂಟು ತಯಾರಿಸಲು ಮಹಾರಾಷ್ಟ್ರದ ಕೊಲ್ಲಾಪುರದಿಂದ ಚಿಕ್ಕಿ ಬೆಲ್ಲ, ಹೈದರಾಬಾದ್ನಿಂದ ದಿಂಡಲ್ ಜವಾರಿ ಅಂಟು, ದೆಹಲಿ ಸೇರಿದಂತೆ ಉತ್ತರ ಭಾರತದಿಂದ ಡ್ರೈಫ್ರ್ಯೂಟ್ಸ್ ತರಿಸಿ ತುಪ್ಪದಲ್ಲೇ ಕರೆದು ಕರದಂಟು, ಲಡಗಿ ಲಾಡು ತಯಾರಿಸುತ್ತಾರೆ.
ವರ್ಷಕ್ಕೆ ಸುಮಾರು 10 ರಿಂದ 15ಕೋಟಿ ವ್ಯಾಪಾರ: ಗೋಕಾಕ್ನಲ್ಲಿ ಶಂಕರ್ ದೇವರಮನಿ ಎಂಬುವವರ ಮಾಲೀಕತ್ವದ ಸದಾನಂದ ಸ್ವೀಟ್ ಅಂಗಡಿಯಿಂದ ಕರ್ನಾಟಕ ಮಹಾರಾಷ್ಟ್ರ, ಗೋವಾ, ಹೈದರಾಬಾದ್, ತಮಿಳುನಾಡು, ಕೇರಳ ಸೇರಿ ಇಡೀ ದೇಶಾದ್ಯಂತ ಕರದಂಟು ಸಪ್ಲೈ ಆಗುತ್ತದೆ. ದಿನಕ್ಕೆ 3 ರಿಂದ 4 ಟನ್ ಕರದಂಟು, 10 ಕ್ವಿಂಟಾಲ್ ಲಡಗಿ ಲಾಡು ಸಿದ್ಧಪಡಿಸುತ್ತಾರೆ. ಅಷ್ಟೇ ಅಲ್ಲ ಆನ್ಲೈನ್ನಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಮೂಲಕವೂ ಮನೆ ಬಾಗಿಲಿಗೆ ಸದಾನಂದ ಕರದಂಟು ಸರಬರಾಜು ಆಗುತ್ತದೆ.
ಡಿಮಾರ್ಟ್, ಬಿಗ್ ಬಜಾರ್, ರಿಲಯನ್ಸ್ನಂತಹ ದೊಡ್ಡ ದೊಡ್ಡ ಮಾಲ್‌ಗಳಲ್ಲಿಯೂ ಸದಾನಂದ ಕರದಂಟು ಸಿಗುತ್ತದೆ. ಮೊದಲಿಗೆ ಕಡಾಯಿಂದ ಕರದಂಟು ಮಾಡುತ್ತಿದ್ದರು. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ತಂದು ಮ್ಯಾನುಫ್ಯಾಕ್ಚರಿಂಗ್ & ಪ್ಯಾಕೇಜಿಂಗ್ ಯೂನಿಟ್ ಸಹ ಮಾಡಲು ಸಿದ್ಧತೆ ನಡೆಸಿದ್ದಾರೆ. ಕೇವಲ ಕರದಂಟು, ಲಡಗಿ ಲಾಡು ಅಷ್ಟೇ ಅಲ್ಲ ಬೆಳಗಾವಿ ಫೇಮಸ್ ಕುಂದಾ, ಖಾರ ಸೇರಿ ವಿವಿಧ ಸಿಹಿ ತಿನಿಸು ಖಾದ್ಯಗಳನ್ನು ತಯಾರಿಸುತ್ತಾರೆ. ವರ್ಷಕ್ಕೆ ಸುಮಾರು 10 ರಿಂದ 15 ಕೋಟಿ ಟರ್ನೋವರ್ ಇದೆ ಅಂತಾ ಶಂಕರ್ ದೇವರಮನಿ ಮೊಮ್ಮಗ ಆನಂದ ತಿಳಿಸಿದ್ದಾರೆ.
ವಿದೇಶ ತಲುಪಿದ ಕರದಂಟು ಸ್ವಾದ: ಒಂದು ಚಿಕ್ಕದಾದ ಗುಡಿಸಲಿನಲ್ಲಿ ಒಂದೇ ಒಂದು ಕಡಾಯಿ ಇಟ್ಟುಕೊಂಡು ಮಾಡುತ್ತಿದ್ದ ಗೋಕಾಕ್‌ನ ಸದಾನಂದ ಕರದಂಟು ಇಂದು 15 ಕೋಟಿ ರೂಪಾಯಿಯಷ್ಟು ವ್ಯವಹಾರ ಮಾಡುತ್ತೆ ಅಂದ್ರೆ ಸಾಮಾನ್ಯ ಮಾತಲ್ಲ. ಉತ್ತಮ ಗುಣಮಟ್ಟ, ಗ್ರಾಹಕರ ವಿಶ್ವಾಸಾರ್ಹತೆಯೇ ಸದಾನಂದ ಕರದಂಟು ವರ್ಲ್ಡ್ ಫೇಮಸ್ ಆಗಲು ಕಾರಣವಂತೆ. ಗೋಕಾಕ್ ಕರದಂಟು ಫೇಮಸ್ ಆಗಲು 80ರ ಹರೆಯದ ಉದ್ಯಮಿ ಶಂಕರ್ ದೇವರಮನಿ ಕಾರಣವಾಗಿದ್ದಾರೆ.