ಬೆಳಗಾವಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಯನ್ನು ಶೀಘ್ರವೇ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಉತ್ತರ ಕರ್ನಾಟಕ ಭಾಗದ ಜನರ ಅನಕೂಲಕ್ಕಾಗಿ ನಮ್ಮ ಇಲಾಖೆಯನ್ನು ಇಲ್ಲಿ ತರಲು ನಿರ್ಧರಿಸಿದ್ದೇವೆ. ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಮಾತನಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಜನತೆ ದೂರದ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲು ನನ್ನ ಇಲಾಖೆ ಇಲ್ಲಿಗೆ ಸ್ಥಳಾಂತರ ಮಾಡಿ ಉಳಿದ ಇಲಾಖೆಗಳ ಸ್ಥಳಾಂತರದ ಬಗ್ಗೆ ನಂತರ ಯೋಚನೆ ಮಾಡಲಾಗುವುದು ಎಂದು ತಿಳಿಸಿದರು.