ಅಥಣಿ(ಬೆಳಗಾವಿ): ಆ ಊರಲ್ಲಿ ಸಂಭ್ರಮ ಕಳೆಗಟ್ಟಿದ್ದು, ಹಬ್ಬದ ವಾತಾವರಣ ಇತ್ತು. ಊರಿನ ಜನರೆಲ್ಲ ಹೂಮಳೆಗರೆದು ಭಾರತಾಂಬೆಯ ಪುತ್ರನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಹೌದು, ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ ಕೋರಿದರು. ನಿಸ್ವಾರ್ಥ ಮನೋಭಾವದಿಂದ ಸೈನ್ಯ ಸೇರಿ 23 ವರ್ಷಗಳ ಕಾಲ ಯೋಧ ಮೀರಾಸಾಬ್ ಮೀರಾಗೋಳ ದೇಶಸೇವೆ ಸಲ್ಲಿಸಿದ್ದಾರೆ. ಇದೀಗ ನಿವೃತ್ತಿಯೊಂದಿಗೆ ಗ್ರಾಮಕ್ಕೆ ಮರುಳಿದಾಗ ಇಡೀ ಗ್ರಾಮದ ಜನರು ಸೇರಿಕೊಂಡು ಅದ್ಧೂರಿ ಸ್ವಾಗತ ಕೋರಿದ್ದಾರೆ. ಯುವಕರು ಗ್ರಾಮದ ತುಂಬೆಲ್ಲ ಭಾರತ ಮಾತೆಗೆ ಜೈಕಾರ ಕೂಗಿ ನಿವೃತ್ತ ಯೋಧನಿಗೆ ಪುಷ್ಪವೃಷ್ಟಿ ಮೂಲಕ ಕೋರಿದರು.
ಮೀರಾಸಾಬ್ ಮೀರಾಗೋಳ 1999ರಲ್ಲಿ ಸೇನೆಗೆ ಸೇರಿಕೊಂಡು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರು ಈ ಹಿಂದೆ ಉತ್ತಮ ಕ್ರೀಡಾಳುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿ ಗ್ರಾಮದ ಕೀರ್ತಿ ಬೆಳಗಿಸಿದ್ದರು. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದು ಪ್ರಾರಂಭವಾದ ಇವರ ಸೇನಾ ಜೀವನ ವೃತ್ತಿ ಬದುಕಿನಲ್ಲಿ ಅನೇಕ ಮಹತ್ವದ ಯುದ್ಧಗಳನ್ನು, ಅಪಾಯದ ಸನ್ನಿವೇಶಗಳನ್ನು ಎದುರಿಸುವಲ್ಲಿ ಹಿಂಜರಿಯಲಿಲ್ಲ.
ಗಡಿ ಪ್ರಾಂತ್ಯದಲ್ಲಿ ನಿಸ್ವಾರ್ಥ ಸೇವೆ:
2001 ರಿಂದ 2002ರಲ್ಲಿ ರಾಜಸ್ಥಾನದ ಓಪ್ ಪರಾಕ್ರಮ ಬಹು ನಿರೀಕ್ಷಿತ ಯುದ್ಧದ ಸನ್ನಿವೇಶದಲ್ಲಿ ಎಸಿಪಿ ಆರ್ಮಡ್ ಫೈಟಿಂಗ್ ವೆಹಿಕಲ್ ಚಾಲಕರಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡರು. ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ್ ಗಡಿ ಪ್ರಾಂತ್ಯದಲ್ಲಿ ಕೆಚ್ಚೆದೆಯಿಂದ ಸೇವೆ ಸಲ್ಲಿಸಿದ್ದಾರೆ.