ಬೆಳಗಾವಿ : ನಾಳೆಯಿಂದ ಲಾಕ್ಡೌನ್ ಹಿನ್ನೆಲೆ ಅಂತರ್ ರಾಜ್ಯ, ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಕೋವಿಡ್ ಗೈಡ್‍ಲೈನ್ಸ್ ಉಲ್ಲಂಘಿಸಿದ್ರೆ ಅಂತಹವರ ವಿರುದ್ಧ ಕಾನೂನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಎಸ್‍ಪಿ ಲಕ್ಷ್ಮಣ್ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಅಂತರ್ ರಾಜ್ಯ, ಜಿಲ್ಲೆ ಸಂಚಾರಕ್ಕೆ ನಿರ್ಬಂಧ.. ನಗರದ ಎಸ್‍ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಮಾಹಿತಿ ನೀಡಿದ ಅವರು, ಅಗತ್ಯ ವಸ್ತುಗಳನ್ನು ಸರ್ಕಾರ ನಿಗದಿಪಡಿಸಿದ ಸಮಯದೊಳಗೆ ಮಾತ್ರ ಖರೀದಿಸಬೇಕು.
ಯಾವುದೇ ಕಾರಣಕ್ಕೂ ಬೈಕ್, ಕಾರ್ಗಳಲ್ಲಿ ರಸ್ತೆಗೆ ಅನವಶ್ಯಕವಾಗಿ ಬರದೇ ನಿಮ್ಮ ಮನೆ ಸಮೀಪದ ಹಾಲಿನ ಅಂಗಡಿ, ಮೆಡಿಕಲ್ ಶಾಪ್, ತರಕಾರಿ, ದಿನಸಿ ವಸ್ತುಗಳನ್ನು ನಡೆದುಕೊಂಡು ಹೋಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿಸಬೇಕು.
ಕೇವಲ ತುರ್ತು ಸೇವೆಗಳಾದ ಆರೋಗ್ಯ, ಕೊರೊನಾ ಸೋಂಕಿತರಿಗೆ, ಗರ್ಭಿಣಿಯರಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇನ್ನುಳಿದವರಿಗೆ ಯಾವುದೇ ರೀತಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಒಂದು ವೇಳೆ ಅನಗತ್ಯವಾಗಿ ರಸ್ತೆಗೆ ಇಳಿಯುವ ವಾಹನಗಳನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಕಾಗುತ್ತದೆ ಎಂದು ತಿಳಿಸಿದ್ದಾರೆ.
ಅಂತಾರಾಜ್ಯ, ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ :ಅಂತರ್ ರಾಜ್ಯ, ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಮದುವೆಗಳಿಗೆ ಕೇವಲ 40, ಅಂತ್ಯಕ್ರಿಯೆಗೆ ಐದು ಜನರಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದ್ರೆ ಕಾನೂನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಕ್ರಮ ರೆಮ್ಡಿಸಿವಿರ್, ಆಕ್ಸಿಜನ್ ಮಾರಾಟ ಗಮನಕ್ಕೆ ತನ್ನಿ: ಜಿಲ್ಲೆಯಲ್ಲಿ ಎಲ್ಲಿಯಾದರೂ ರೆಮ್ಡಿಸಿವಿರ್, ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಕಂಡು ಬಂದರೆ ಪೊಲೀಸ್ ಇಲಾಖೆಯ ಡಯಲ್ 112ಗೆ ತಿಳಿಸಬೇಕು. ಸಹಾಯಕ್ಕಾಗಿ ಬೇಕಿದ್ದರೂ 112 ನಂಬರ್ ಸಂಪರ್ಕಿಸಿ ಎಂದರು.
ಸಮಾಜ ಸೇವೆಯೇ ಪೊಲೀಸರ ಧ್ಯೇಯ :ಕೋವಿಡ್ ವಿರುದ್ಧ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಪೊಲೀಸರಿಗೂ ಕುಟುಂಬವಿದೆ ಎಂಬುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಸಮಾಜ ಸೇವೆಯೇ ಪೊಲೀಸರ ಮುಖ್ಯಧ್ಯೇಯವಾಗಿದೆ. ಜನರ ಆರೋಗ್ಯ ಹಾಗೂ ಸಮಾಜದ ಆರೋಗ್ಯ ಕಾಪಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಆದ್ದರಿಂದ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.