ಬೆಳಗಾವಿ:ಸಿಡಿ ಪ್ರಕರಣ ಹಾಗೂ ಅನಾರೋಗ್ಯದ ಕಾರಣ ವಿಶ್ರಾಂತಿಗೆ ಜಾರಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇಂದು ದಿಢೀರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಎಸ್ಐಟಿ ತನಿಖೆ ಹಾಗೂ ಕಾನೂನು ಹೋರಾಟದಲ್ಲಿ ತಲ್ಲೀನರಾಗಿದ್ದರು. ನಂತರ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೊರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ಗೋಕಾಕ್ ತಾಲೂಕಾಡಳಿತದೊಂದಿಗೆ ಸಭೆ ನಡೆಸಿ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಪ್ರತಿಪಕ್ಷ ನಾಯಕರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನತಾ ಕರ್ಫ್ಯೂ ಬಿಗಿಗೊಳಿಸಿದ್ದಾರೆ. ಅಂತರ್ ಜಿಲ್ಲಾ ಸಂಪರ್ಕ ಕಡಿತಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ರಾಜ್ಯ ಹಾಗೂ ತಾಲೂಕಿನಿಂದ ಕೊರೊನಾ ಓಡಿಸಲು ಸಂಕಲ್ಪ ಮಾಡಲಾಗಿದೆ. 15 ದಿನಗಳಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಗೃಹಸಚಿವರನ್ನು ಸಂಪರ್ಕಿಸಿ, ಆಕ್ಸಿಜನ್ ಪೂರೈಸುವಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ ಎಂದರು.